Thursday 29 September 2011

RAMA BUS


ವಿಜಯಲಕ್ಷ್ಮೀ ಬಂತು, ಗುರುರಾಘವೇಂದ್ರ ಹೋಯ್ತು, ಉದಯ ಬರ್ಲಿಕ್ಕೆ ಸ್ವಲ್ಪ ಲೇಟಾಗುತ್ತೆ ರಾಮ ಇವತ್ತು ಬೇಗ ಬಂತು.... ಇದು ಯಾವುದರ ಬಗ್ಗೆ ಹೇಳೋದು ಗೊತ್ತಾ ? ಬಸ್ಗಳ ಬಗ್ಗೆ....ನಮ್ಮೂರು ಕಡೆ ಬಸ್ಗಳನ್ನ ಒಂದು ಯಂತ್ರ ಅಂತ ಯಾರೂ ನೋಡೋಲ್ಲ. ಅದ್ರಲ್ಲೂ ಪ್ರೈವೆಟ್ ಬಸ್ಗಳಂದ್ರೆ ಸ್ವಲ್ಪ ಪ್ರೀತಿ ಜಾಸ್ತಿ. ಹಾಗಾಗಿ ಬಸ್ಗಳ ಹೆಸ್ರು ಹೇಳೋವಾಗ ಯಾರೂ ಹೆಸರಿನ ಮುಂದೆ, ಮತ್ತೆ ಬಸ್ ಅಂತ ಸೇರಿಸೋ ಕಷ್ಟ ತಗೊಳ್ಳೋಲ್ಲ! ನನ್ಗೆ ಸಣ್ಣವನಿದ್ದಾಗಲೇ ಈ ರಾಮ ಬಸ್ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಅದ್ರಲ್ಲೂ ತಲಕಾವೇರಿ ರಾಮ ಅಂದ್ರೆ ಏನೋ ಒಂಥರ ಪ್ರೀತಿ ! ಭಾಗಮಂಡಲ ಮತ್ತೆ ಮಡಿಕೇರಿ ಮಧ್ಯೆ ಇರೋ ದೂರ 38 ಕಿಲೋಮೀಟರ್. ಇಷ್ಟು ಅಂತರ ಕ್ರಮಿಸೋದಿಕ್ಕೆ ರಾಮಬಸ್ ಹತ್ತಿರ ಹತ್ತಿರ ಎರಡೂವರೆ ಗಂಟೆ ತಕ್ಕೊಳ್ತಿತ್ತು. ಡ್ರೈವರ್ ರಾಘವಯ್ಯಣ್ಣ, ಬಸ್ಗೆ ನೋವಾಗುತ್ತೋ, ರೋಡ್ಗೆ ಪೆಟ್ಟಾಗುತ್ತೋ ಅಥ್ವಾ ತಮ್ಮ ಸೊಂಟ ಉಳುಕಿ ಎಲ್ಲಿ ರಾತ್ರಿ ಹೆಂಡತಿ ಕೈಯಲ್ಲಿ ಬೈಸಿಕೊಳ್ಳಬೇಕಾಗುತ್ತೋ ಅನ್ನೋ ಹಾಗೆ ನಿಧಾನಕ್ಕೆ ಓಡಿಸ್ತಿದ್ದ್ರು. ಭಾಗಮಂಡಲದಲ್ಲಿ ಹತ್ತಿ ಕೂತವ್ರಿಗೆ ಮಡಿಕೇರಿ ಟೋಲ್ಗೇಟ್ ತಲುಪೋ ತನಕ ಒಳ್ಳೇ ಒಂದು ನಿದ್ದೆ ಆಗ್ತಿತ್ತು. ಈಗ ಭಾಗಮಂಡಲದಲ್ಲಿ ಪ್ರತೀ ವರ್ಷ ಮೆರಥಾನ್ ನಡೆಯುತ್ತೆ. ಇದ್ರಲ್ಲಿ ಫಸ್ಟ್ ಬರೋರು ಮಡಿಕೇರಿಯಿಂದ ಭಾಗಮಂಡಲಕ್ಕೆ ಬರೀ ಒಂದೂವರೆ ಗಂಟೇಲಿ ಓಡ್ತಾರೆ. ಅಂದ್ರೆ ಆ ರಾಮ ಬಸ್ಗಿಂತ ಈ ಓಡೋ ಜನರೇ ಫಾಸ್ಟ್ ಅಂದ ಹಾಗೆ ಆಯ್ತು. ಅಂದ ಹಾಗೆ ಈ ತಲಕಾವೇರಿ ರಾಮ ಇದ್ಯಲ್ಲ, ಇದು ತಲಕಾವೇರಿ ದೇವಾಸ್ಥಾನಕ್ಕೆ ಸೇರಿದ ಬಸ್ ರಾಮ ಮೋಟಾರ್ರ್ಸನವ್ರು ಇದನ್ನ ದೇವಾಸ್ಥಾನಕ್ಕೆ ಕೊಟ್ಟಿದ್ದಾರೆ. ಆದ್ರೆ ಮೈಂಟೇನೆನ್ಸ್ ಎಲ್ಲಾ ಅವ್ರೇ ನೋಡಿಕೊಳ್ಳೋದ್ರಿಂದ ದೇವಸ್ಥಾನಕ್ಕೆ ವರ್ಷಕ್ಕೆ ಇಷ್ಟು ಅಂತ ಕೊಡ್ತಾರೆ. ಹೋದ ತಿಂಗ್ಳು ನಾನು ಭಾಗಮಂಡಲಕ್ಕೆ ಹೋಗಿದ್ದೆ. ಆ ತಲಕಾವೇರಿ ರಾಮ ಎಲ್ಲಾದ್ರೂ ಕಾಣುತ್ತಾ ಅಂತ ಹುಡುಕ್ತಿದ್ದಾಗ, ಭಾಗಮಂಡಲ ದೇವಸ್ಥಾನ ಎದುರೇ ನಿಂತಿತ್ತು. ಕ್ಲೀನರ್ `ತಲಕಾವೇರಿ' `ತಲಕಾವೇರಿ' ಅಂತ ಕರೀತ್ತಿದ್ದ.... ಬಸ್ ಬಣ್ಣನೂ ಈಗ ಚೇಂಜ್ ಆಗಿತ್ತು. ಬಹುಶಃ ಅದ್ರ ಡ್ರೈವರ್, ಸ್ಪೀಡ್ ಕೂಡ ಬದ್ಲಾಗಿರ್ಬಹುದೇನೋ....

No comments: