Saturday 1 October 2011

ಮೀನು ಬೇಟೆ


ಹೊಳೆ ಮೀನು ತಿಂದವ್ರಿಗೆ ಅದ್ರ ರುಚಿ ಗೊತ್ತಿರುತ್ತೆ. ಮುಳ್ಳು ಸ್ವಲ್ಪ ಜಾಸ್ತಿ ಆದ್ರೂ, ರುಚಿ ಮುಂದೆ ಅದೆಲ್ಲಾ ಲೆಕ್ಕಕ್ಕೇ ಬರೋಲ್ಲ. ಎರಡು ಕೈ ಯೂಸ್ ಮಾಡ್ಕೊಂಡು ಮುಳ್ಳನ್ನೆಲ್ಲಾ ಬಿಡಿಸಿಕೊಂಡು.... ಆ ಹೊಳೆ ಮೀನುಗಳನ್ನ ತಿನ್ನೋದು ಇದ್ಯಲ್ಲಾ, ಹೇಳೋಕ್ಕೆ ಆಗೋಲ್ಲ..ತಿಂದು ಅನುಭವಿಸಬೇಕಷ್ಟೇ...ಇನ್ನು ಮೀನು ಹಿಡಿಯೋದು ಸಕ್ಕತ್ ಮಜಾ ಕೊಡುತ್ತೆ. ನದಿ ಹತ್ರ ವಾಸ ಮಾಡ್ತಾರಲ್ಲ, ಅವ್ರನ್ನ ಕೇಳಿನೋಡಿ...`ಅಯ್ಯೋ...ಮೊದಲಿನ ಹಾಗೆಲ್ಲ ಈಗ ಮೀನು ಇಲ್ಲ, ಎಲ್ಲಾ ಎಲ್ಲಿ ಹೋಗಿಬಿಟ್ವೋ...'ಅನ್ನೋದನ್ನ ಕೇಳ್ಬಹುದು. ಹೌದು, ಅವ್ರು ಹೇಳೋದು ನಿಜ. ನನ್ನ ಅಜ್ಜಿ ಮನೆ ಮುಕ್ಕೋಡ್ಲುವಿನಲ್ಲಿ ಹಟ್ಟಿಹೊಳೆ ಹರಿಯುತ್ತೆ. ಇದೇ ಮುಂದೆ ಹಾರಂಗಿ ನದಿಯಾಗಿ ಡ್ಯಾಂ ಸೇರೋದು. ಈ ಹಟ್ಟಿಹೊಳೇಲಿ ಈ ಹಿಂದೆ ತುಂಬಾ ಮೀನುಗಳು ಇದ್ವು... ನಮ್ ಪಳಂಗ ಮಾವ ಅಥವಾ ಬಾಬು ಮಾವ ಕತ್ತಿ ಹಿಡ್ಕೊಂಡು ಹೊಳೆ ಹತ್ತಿರ ಹೋದ್ರು ಅಂದ್ರೆ ಸಾಕು, ಆವತ್ತು `ಬರೇಮೀನು' ಸಾರು ಗ್ಯಾರಂಟಿ ! ಬರೇಮೀನು ತುಂಬಾ ರುಚಿಯಾಗಿರುತ್ತೆ... ಆದ್ರೆ ಈಗ ಇದು ನದಿಯಲ್ಲಿ ಸಿಗೋದು ತುಂಬಾ ಕಡಿಮೆ. ಕೆರೆಯಲ್ಲಿ ಸಾಕಿದ ಬರೆಮೀನು ಅಂಗಡಿಗಳಲ್ಲಿ ಸಿಗುತ್ತೆ. ಆದ್ರೆ ಅದು ಟೇಸ್ಟ್ ಇರೋಲ್ಲ ಅನ್ನೋದು `ಹೊಳೆ ಮೀನು ತಜ್ಞರ' ಅಭಿಪ್ರಾಯ.
ಇನ್ನು ಸಣ್ಣಮಾಮ ಹೊಳೆಗೆ `ತೋಟ' ಹಾಕೋದ್ರಲ್ಲಿ ಎಕ್ಸ್ಪಟರ್್. ಅವ್ರು `ತೋಟ' ಹಾಕೋಕೆ ಹೊರಟ್ರು ಅಂದ್ರೆ, ನಾವೆಲ್ಲಾ ಅವ್ರ ಹಿಂದೆ ಹಿಂದೆ... ಬೀಡಿಯನ್ನ ಉಫ್ ಉಫ್ ಅಂತ ಹೇಳೋದು... ಅದ್ರಲ್ಲಿ ಕೆಂಡದ ಚಿಕ್ಕ ಚುಕ್ಕಿ ಕಾಣೋದು... ಆ ಚುಕ್ಕಿ ಮೇಲೆ `ತೋಟ'ದ ಬತ್ತಿಯನ್ನ ಇಡೋದು... ಆ ಬತ್ತಿ ಸುರು ಸುರು ಅಂತ ಹೇಳ್ತಿದ್ದ ಹಾಗೆ ನದಿಗೆ ಎಸೆಯೋದು... ಸ್ವಲ್ಪ ಹೊತ್ತು ಎಲ್ಲಾ ಕಡೆ ನಿಶ್ಯಬ್ಧ ! ನಾವೆಲ್ಲಾ ಕಿವಿ ಮುಚ್ಚಿಕ್ಕೊಂಡು ಕಣ್ಣು ಬಿಟ್ಟುಕೊಂಡು ತೋಟ ಎಸೆದ ಜಾಗ ನೋಡ್ತಿದ್ದ ಹಾಗೆ, ಢಮಾರ್ ಅನ್ನೋ ಸದ್ದಿನ ಜೊತೆ ನೀರಿನ ರಾಶಿ ಆಕಾಶದ ಕಡೆಗೆ ಚಿಮ್ತಿತ್ತು... ಜೊತೇಲಿ ಚಿಕ್ಕ, ದೊಡ್ಡ ಮೀನುಗಳೂ ! ಅಲ್ಲಿ ಆಳ ಜಾಸ್ತಿ ಇದ್ರೆ ನಮ್ಗೆ ಇಳಿಯೋದಿಕ್ಕೆ ಬಿಡ್ತಿರ್ಲಿಲ್ಲ..`ಮುಳುಗು ತಜ್ಞರು' ನದೀಲಿ ಸತ್ತು ತೇಲಾಡೋ ಮೀನುಗಳನ್ನ ಕಲೆಕ್ಟ್ ಮಾಡ್ತಿದ್ದ್ರು... ಕೆಜಿ ಗಟ್ಟಲೆ ಮೀನುಗಳು ಸಿಗ್ತಿದ್ದವು. ಈಗ `ತೋಟ' ಹಾಕಿದ್ರೆ ಬರೇ ನೀರು ಚಿಮ್ಮೋದನ್ನ ಮಾತ್ರ ನೋಡ್ಬಹುದು...ಜೊತೆಗೆ ಕಂಬಿ ಎಣಿಸೋ ಭಾಗ್ಯವೂ ಬರ್ಬಹುದು !
ಇನ್ನು ನಮ್ಗೆಲ್ಲಾ ತುಂಬಾ ಇಷ್ಟ ಆಗೋದು ಅಂದ್ರೆ, ಬಲೆ ಹಾಕಿ ಮೀನು ಹಿಡಿಯೋದು. ಒಂದು ದೊಡ್ಡ ಬಲೆ ಹಿಡ್ಕೊಂಡು, ಅರ್ಧಚಂದ್ರಾಕಾರದಲ್ಲಿ ನದಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗಲಾಗುತ್ತೆ. ಆಗ ಅದ್ರೊಳಗೆ ಮೀನುಗಳು ಸಿಕ್ಕಿಹಾಕೊಳ್ತವೆ. ಇದಕ್ಕೆ ಜನ ಜಾಸ್ತಿ ಇದ್ದಷ್ಟು ಒಳ್ಳೇದು... ಮೀನುಗಳೂ ಬೇಕಾದಷ್ಟು ಸಿಕ್ತಿದ್ದವು. ಈಗ ಮೀನುಗಳ ಸಂಖ್ಯೆ ತುಂಬಾ ಕಡಿಮೆ ಆಗಿರೋದ್ರಿಂದ ಈ ರೀತಿ ಬಲೆ ಹಾಕೋದೆಲ್ಲಾ ಅಪರೂಪ ಆಗ್ಬಿಟ್ಟಿದೆ.
ಬಲ್ಲಮಾವಟಿ ಹತ್ರ ಕಾವೇರಿ ನದಿ ಹರಿದುಹೋಗುತ್ತೆ. ಇಲ್ಲಿ ಹೆಚ್ಚಾಗಿ ರಾತ್ರಿ ನದಿಗೆ ಅಡ್ಡವಾಗಿ ಬಲೆ ಕಟ್ಟಿ ಬೆಳಗ್ಗೆ ತೆಗಿತಾರೆ. ಅದೃಷ್ಟ ಇದ್ರೆ ದೊಡ್ಡ ದೊಡ್ಡ ಮೀನುಗಳು ಸಿಗ್ತವೆ. ಇಲ್ಲಂದ್ರೆ, ಚಿಕ್ಕ ಮೀನುಗಳಿಗೇ ತೃಪ್ತಿಪಟ್ಟುಕೊಳ್ಳಬೇಕು. ನಮ್ ಎಡಿಕೇರಿ ಸುಮು ಈ ರೀತಿ ಬಲೆ ಹಾಕೋದ್ರಲ್ಲಿ ಎಕ್ಸ್ಪಟರ್್ ! ಈಗ ಅವ್ನು ಅಲ್ಲಿ ಇಲ್ಲ... ಹಾಗಂತ ಮೀನುಗಳ ಸಂಖ್ಯೆ ಜಾಸ್ತಿ ಆಗಿದೆಯಾ ಅಂತ ನೋಡಿದ್ರೆ, ಅಲ್ಲೂ ನಿರಾಸೆ!
ಗಾಳ ಹಾಕೋದು ಒಂಥರ ಚಟ ಇದ್ದಹಾಗೆ. ಮೀನು ಸಿಗ್ಲಿ, ಸಿಕ್ಕದಿರ್ಲಿ... ನದಿಗೆ ಗಾಳ ಬಿಟ್ಕೊಂಡು ಕೂರೋದ್ರಲ್ಲೂ ಒಂಥರ ಸುಖ ಇದೆ. ಭಾಗಮಂಡಲದಲ್ಲಿ ಮಳೆಗಾಲ ಸಮಯದಲ್ಲಿ ಕೊಡೆ ಹಿಡ್ಕೊಂಡು, ಒಂದು ಗಾಳ ತಕ್ಕೊಂಡು ಕಾವೇರಿ ಅಥ್ವಾ ಕನ್ನಿಕಾ ಹೊಳೆ ಕಡೆ ಹೋಗ್ಬಿಟ್ರೆ.... ಸಂಜೆ ಆಗೋದೇ ಗೊತ್ತಾಗ್ತಿರ್ಲಿಲ್ಲ. ಮನೆಗೆ ವಾಪಸ್ ಹೋಗ್ಬೇಕು ಅಂದ್ರೆ ಅಪ್ಪ ಕೋಲು ಜೊತೆ ಬರ್ಬೇಕಿತ್ತು. ಆಗೆಲ್ಲಾ ನಮ್ಗೆ ಸಿಗ್ತಿದ್ದದ್ದು, ಹಾವುಮೀನು....ಅದ್ನ ತಿನ್ತಿರ್ಲಿಲ್ಲ. ಆದ್ರೆ ಅದ್ನ ಹಿಡಿಯೋದು ತುಂಬಾ ಮಜಾ ಕೊಡ್ತಿತ್ತು.
ಇನ್ನೊಂದು ಅಮಾನವೀಯ ಪದ್ಧತಿ ಇದೆ. `ಮದ್ದು ಹಾಕೋದು' ಅಂತ ಅದನ್ನ ಹೇಳ್ತಾರೆ. ಕೀಟನಾಶಕ ಅಥ್ವಾ ಕಳೆನಾಶಕದಂಥ ರಾಸಾಯನಿಕವನ್ನ ನದಿಗೆ ಚೆಲ್ಲಿಬಿಡೋದು... ನದಿ ಹರಿದಷ್ಟೂ ದೂರ ಇಲ್ಲವೇ ಆ ರಾಸಾಯನಿಕದ ಶಕ್ತಿ ಕಡಿಮೆ ಆಗೋ ಜಾಗದ ತನಕ ಮೀನುಗಳು ಸೇರಿ ಎಲ್ಲಾ ಜಲಚರಗಳ ಮಾರಣಹೋಮವೇ ನಡೆದು ಹೋಗ್ತಿತ್ತು. ಈಗ ಈ ಥರ ಮಾಡೋದು ಕಡಿಮೆ ಆಗಿದೆ. ಆದ್ರೆ ದ್ವೇಷಕ್ಕೆ ಕೆರೆಗಳಲ್ಲಿ ಈ ರೀತಿ ಮಾಡೋದು ಉಂಟು.
ಏನೇ ಹೇಳಿ, ಹೊಳೆ ಮೀನುಗಳ ಟೇಸ್ಟ್ ಮತ್ತೆ ಅದನ್ನ ಹಿಡಿಯೋವಗ ಸಿಗೋ ಮಜಾವೇ ಬೇರೆ....

No comments: