Friday 16 December 2011

ಎಲ್ಲಿ ಹೋಯಿತು ಮಾನವೀಯತೆ ?



ನಿನ್ನೆ ರಾತ್ರಿ 12 ಗಂಟೆ. ಡ್ಯೂಟಿ ಮುಗ್ಸಿ ರೂಂಗೆ ಹೋಗೋಕೆ ಅಂತ ಕ್ಯಾಬ್ ಸ್ಟ್ಯಾಂಡ್ಗೆ ಹೋಗಿ ತಲುಪಿದ್ದೆ. ಅಷ್ಟೊತ್ತಿಗೆ ನೈಟ್ಶಿಫ್ಟ್ನ ಬಿಪಿ ನಾಡಿಗ್ ಹಿಂದೆನೇ ಓಡಿ ಬಂದು, ನಂ ಆಫೀಸ್ ಹತ್ರನೇ ಆ್ಯಕ್ಸಿಡೆಂಟ್ ಆದ ವಿಷ್ಯ ಹೇಳಿದ್ರು. ನೈಟ್ ಶಿಫ್ಟ್ ಕ್ಯಾಮೆರಾಮ್ಯಾನ್ ಅದಾಗ್ಲೇ ಎಂಜಿ ರೋಡ್ಲಿ ಆಗಿದ್ದ ಆ್ಯಕ್ಸಿಡೆಂಟ್ ಶೂಟ್ ಮಾಡೋಕೆ ರಿಪೋರ್ಟರ್ ಜೊತೆ ಹೋಗಿದ್ದ್ರು. ಇನ್ನೇನು ಮಾಡೋದು ಅಂತ ಯೋಚ್ನೆ ಮಾಡ್ತಿರ್ಬೇಕಾದ್ರೆ, ಸ್ಟುಡಿಯೋ ಕ್ಯಾಮೆರಾಮ್ಯಾನ್ ಓಡಿ ಹೋಗಿ ಕ್ಯಾಮೆರಾ ತಂದು ಶೂಟಿಂಗ್ಗೆ ರೆಡಿಯಾದ್ರು.
ಕೋರಮಂಗಲ ಬಿಗ್ಬಜಾರ್ನ ನಮ್ಮ ಆಫೀಸ್ ಹತ್ರನೇ ಆ್ಯಕ್ಸಿಡಂಟ್ ಆಗಿತ್ತು. ವಾಹನಗಳ ಪರಿಸ್ಥಿತಿ ನೋಡಿದ್ರೆ, ಕನಿಷ್ಠ ಇಬ್ರಾದ್ರೂ ತೀರ್ಕೊಂಡಿರ್ಬಹುದೇನೋ ಅನ್ನೋ ಥರ ಇತ್ತು. ಮಡಿವಾಳ ಕಡೆಯಿಂದ ಬರ್ತಿದ್ದ ಟಾಟಾ ಸಫಾರಿಯ ಕುಡುಕ ಡ್ರೈವರ್ ರೋಡ್ ಡಿವೈಡರ್ ದಾಟಿ ರಾಂಗ್ ಸೈಡಿನಲ್ಲಿ ನುಗ್ಗಿದ್ದ. ಆ ರಭಸಕ್ಕೆ ವ್ಯಾಗನ್ ಆರ್ನ ಮೂತಿ ಪುಡಿಪುಡಿ ಆಗಿತ್ತು. ಮತ್ತೊಂದು ಟಾಟಾ ಇಂಡಿಕಾಕ್ಕೂ ಹಾನಿ ಆಗಿತ್ತು. ಅಷ್ಟು ಕಿತಾಪತಿ ಮಾಡಿದ ಕುಡುಕ ಡ್ರೈವರ್ನ ಟಾಟಾ ಸಫಾರಿ ಎದುರಿಗೆ ಇದ್ದ ಫುಟ್ಪಾತ್ ಮೇಲೆ ಹೋಗಿನಿಂತುಬಿಟ್ಟಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿರ್ಲಿಲ್ಲ. ಆದ್ರೆ ನನಗೆ ಅಲ್ಲೊಂದು ಶಾಕ್ ಕಾದಿತ್ತು. ನಮ್ಮ ಜನ ಇಷ್ಟೊಂದು ಅಮಾನವೀಯವಾಗಿ ವತರ್ಿಸ್ತಾರ ? ಸಂವೇದನೆಯನ್ನ ಈ ಮಟ್ಟಿಗೆ ಕಳ್ಕೊಂಡಿದ್ದಾರಾ ಅಂತ ಯೋಚನೆ ಮಾಡೋ ಹಾಗಾಯಿತು.
ಈ ಆ್ಯಕ್ಸಿಡೆಂಟ್ ಆಗ್ತಿದ್ದ ಹಾಗೆ ಹೊಸೂರು ರೋಡ್ನಲ್ಲಿ ಟ್ರಾಫಿಕ್ ಜಾಂ ಆಯ್ತು. ಒಮ್ಮೆಲೇ ತುಂಬಾ ಜನ ಸೇರಿದ್ರು. ಪುಡಿಪಡಿಯಾದ ವಾಹನದೊಳಗೆ ಇರುವವರ ಸ್ಥಿತಿ ಏನೇನಾಗಿದೆ ಅನ್ನೋದನ್ನ ನೋಡೋ ಕಾಳಜಿ ಯಾರಿಗೂ ಇರಲಿಲ್ಲ. ಒಂದಿಷ್ಟು ಹುಡುಗರ ತಂಡ ಅಲ್ಲಿದ್ದ ಮೂರೂ ವಾಹನಗಳ ಡೋರ್ ಓಪನ್ ಮಾಡ್ತು. ಕೈಗೆ ಸಿಕ್ಕಿದ ಲ್ಯಾಪ್ಟಾಪ್, ಐ ಫೋನ್, ವ್ಯಾನಿಟಿ ಬ್ಯಾಗ್, ಪಸರ್್ ಕೊನೆಗೆ ನೀರಿನ ಬಾಟಲ್ ಎಲ್ಲವನ್ನೂ ದೋಚಿದ್ರು. ಗಾಯಗೊಂಡು ನರಳ್ತಿದ್ದವ್ರು ತಮ್ಮ ವಸ್ತುಗಳು ಇನ್ನೊಬ್ಬರ ಪಾಲಾಗ್ತಿರೋದನ್ನ ನೋಡಿ ಬೊಬ್ಬೆ ಹೊಡೀತಿದ್ದ್ರೂ, ಯಾವುದೇ ಪ್ರಯೋಜನ ಆಗಿಲ್ಲ. ಅಲ್ಲಿದ್ದ ಪೊಲೀಸ್ರು ಇದಕ್ಕೆಲ್ಲಾ ಮೂಕಸಾಕ್ಷಿಗಳಾಗಿದ್ದ್ರು. ನಮ್ಮ ಕೆಮೆರಾಮ್ಯಾನ್ ಆ್ಯಕ್ಸಿಡೆಂಟ್ ದೃಶ್ಯಗಳನ್ನ ಶೂಟ್ ಮಾಡ್ತಿದ್ದ್ರೆ, ಇದೇ ತಂಡ ಅಡ್ಡಿಪಡಿಸ್ತು. ಬಹುಶ: ಕೆಮೆರಾ ಲೈಟ್ ಬೆಳಕಿನಲ್ಲಿ ತಮ್ಮ ಕೈಚಳಕ ಎಲ್ಲಿ ಬಯಲಾಗುತ್ತೆ ಅನ್ನೊ ಭಯ ಇರ್ಬೇಕು. ಇಷ್ಟೇ ಅಲ್ಲ, ವ್ಯಾಗನ್ ಆರ್ನಲ್ಲಿ ಇದ್ದ ಗಾಯವಾಗಿದ್ದ ಮಹಿಳೆಯನ್ನ ಆ್ಯಂಬುಲೆನ್ಸ್ಗೆ ಸಾಗಿಸುವಾಗಂತೂ ಈ ತಂಡದ ಒಬ್ಬಾತ ನಡೆದುಕೊಂಡಿದ್ದು, ನಾಗರಿಕರು ಅನ್ನಿಸಿಕೊಂಡವರು ತಲೆತಗ್ಗಿಸುವ ಹಾಗಿತ್ತು. ಆಕೆ `ಡೋಂಟ್ ಟಚ್ ಮಿ' ಅಂತ ಕೂಗ್ತಿದ್ದ್ರೆ, ಈತ ಆಕೆಯ ಮುಟ್ಟಬಾರದ ಜಾಗಗಳನ್ನ ಮುಟ್ಟಿ ಸಂಗಡಿಗರತ್ತ ನೋಡಿ ಹಲ್ಲುಗಿಂಜುತ್ತಿದ್ದ.
ಸುದ್ದಿಮನೆಯಲ್ಲಿ ಕೂರುವ ನನಗೆ ಇಂಥದ್ದೆಲ್ಲಾ ಕೇಳಿ, ಓದಿ ಗೊತ್ತಿತ್ತಷ್ಟೆ... ಕೆಲವೊಂದು ಎಲ್ಲೋ ಅತಿರಂಜನೀಯ ಇರ್ಬಹುದೇನೋ ಅಂತ ಸುಮ್ನೆ ಆಗಿಬಿಡ್ತಿದ್ದೆ. ಆದ್ರೆ ನನ್ನ ಕಣ್ಣಮುಂದೆಯೇ ನಡೆದಾಗ ಮಾತ್ರ, ನಾವು ಇಷ್ಟು ಕೆಟ್ಟುಹೋಗಿದೆಯೇ ಅನ್ನಿಸೋಕೆ ಶುರುವಾಗಿದೆ. ಛೇ... ಎಂಥ ನಾಚಿಕೆಗೇಡು !

No comments: