Tuesday, 20 December 2011

ಕೊಡಗಿನಲ್ಲಿ ಸಕಲೇಶಪುರದ ಕಿತ್ತಳೆ !




ಕುಶಾಲನಗರದಿಂದ ಮಡಿಕೇರಿಗೆ ಹೋಗುವ ರಸ್ತೆ ಬದೀಲಿ ಅಲ್ಲಲ್ಲಿ ಕಿತ್ತಳೆ ಹಣ್ಣು ಮಾರ್ತಿರೋದನ್ನ ಕಾಣ್ಬಹುದು. ಕೊಡಗಿನ ಕಿತ್ತಳೆ ಅಂತ ಅದನ್ನ ಖರೀದಿಸಿದ್ರೆ, ನೀವು ಮೋಸ ಹೋದ್ರಿ ಅಂತನೇ ಅರ್ಥ. ಏಕಂದ್ರೆ ಅಲ್ಲಿ ಮಾರೋದು ಕೊಡಗಿನ ಕಿತ್ತಳೆ ಅಲ್ಲ. ಅದು ಸಕಲೇಶಪುರದಿಂದ ತಂದು, ಇಲ್ಲಿ ಮಾರೋ ಕಿತ್ತಳೆ ! ಕಿತ್ತಳೆ ಖರೀದಿಗೆ ಕೊಡಗಿನವರು ಬಂದಿದ್ದಾರೆ ಅಂತಾದ್ರೆ, ನಿಜ ಹೇಳ್ತಾರೆ. ಅದೇ ದೂರದಿಂದ ಬಂದ ಪ್ರವಾಸಿಗರಾದ್ರೆ ಮೂರು ನಾಮ ! ಅಲ್ಲಿ ಕೊಡಗಿನ ಕಿತ್ತಳೆ ಸಿಗೋದಿಲ್ಲ, ಬದಲಿಗೆ ಸ್ಥಳೀಯವಾಗಿ ಬೆಳೆದ ಸಿಹಿಸಿಹಿ ಮೂಸಂಬಿ ಸಿಗುತ್ತೆ.
ಒಂದು ಕಾಲ ಇತ್ತು, ಕೊಡಗು ಅಂದ್ರೆ, ಕಿತ್ತಳೆಯಿಂದ ಗುರುತಿಸುತ್ತಿದ್ದ ಸಮಯ ಅದು. ಪಂ. ಜವಾಹರ್ ಲಾಲ್ ನೆಹರು ಕೊಡಗಿಗೆ ಬಂದಿದ್ದಾಗ ಇಲ್ಲಿನ ಕಿತ್ತಳೆಯ ರುಚಿ ಮತ್ತೆ ಹುಡುಗಿಯರ ಸೌಂದರ್ಯದ ಬಗ್ಗೆ ಹೊಗಳಿ ಮಾತಾಡಿದ್ದ್ರು. 1960ರ ಸುಮಾರಿಗೆ ಕೊಡಗಿನಲ್ಲಿ ಅಂದಾಜು 24 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಿತ್ತಳೆ ಬೆಳೆಯಲಾಗ್ತಿತ್ತು. ಈಗ ಅದು 1400 ಹೆಕ್ಟೇರ್ಗೆ ಬಂದು ನಿಂತಿದೆ. ಆಗೆಲ್ಲಾ ಒಂದು ಗಿಡದಲ್ಲಿ 60 ಕೆಜಿಯಷ್ಟು ಕಿತ್ತಳೆ ಫಸಲು ಬತರ್ಿತ್ತು. ಆದ್ರೆ ಈಗ 10 ಕೆಜಿಯೂ ಸಿಗ್ತಿಲ್ಲ. ಕಾಫಿಗಿಡದ ಮಧ್ಯೆ ಇರ್ತಿದ್ದ ಕಿತ್ತಳೆ ಗಿಡಗಳು ತೋಟದ ಸೌಂದರ್ಯ ಹೆಚ್ಚಿಸೋಕೆ ಕೂಡ ಸಹಾಯ ಆಗ್ತಿದ್ದ್ವು.
ಕೊಡಗಿನ ಕಿತ್ತಳೆಯ ರುಚಿಯೇ ತುಂಬಾ ವಿಶಿಷ್ಟ. ರುಚಿಯಲ್ಲಿ ಈ ಕಿತ್ತಳೆ ಬಿಟ್ಟರೆ, ನಾಗ್ಪುರದ ಕಿತ್ತಳೆ ಎರಡನೇ ಸ್ಥಾನದಲ್ಲಿ ನಿಲ್ಲುತ್ತೆ. ಕೊಡಗಿನ ಕಿತ್ತಳೆಯ ಸಿಪ್ಪೆ ತೆಳು. ನೀರಿನಂಶ ಜಾಸ್ತಿ. ಬಾಯಿಯಲ್ಲಿ ನೀರೂರಿಸೋ ಹುಳಿಮಿಶ್ರಿತ ಸಹಿ, ಇದರ ರುಚಿ. ದಶಕಗಳ ಹಿಂದೆ ಬಂದ ಕಟ್ಟೆರೋಗ, ಕೊಡಗಿನಲ್ಲಿ ಕಿತ್ತಳೆ ಬೆಳೆ ನಶಿಸೋ ಹಾಗೆ ಮಾಡ್ತು.
ಇತ್ತೀಚೆಗೆ ಕೊಡಗಿನ ಕಿತ್ತಳೆಗೆ ವಿಶೇಷ ಭೌಗೋಳಿಕ ಬೆಳೆಯ ಮಾನ್ಯತೆ ಸಿಕ್ಕಿದೆ. ಇದರ ಸಹಾಯದಿಂದ ಕೊಡಗಿನಲ್ಲಿ ಕಿತ್ತಳೆ ಬೆಳೆ ಪುನಶ್ಚೇತನಕ್ಕೆ ಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕೃಷಿ ಮಿಷನ್ ನಲ್ವತ್ತೇಳೂವರೆ ಲಕ್ಷ ರೂಪಾಯಿಯ ಯೋಜನೆ ರೂಪಿಸಿದೆ. ಆದ್ರೆ ಇದರ ದುರುಪಯೋಗ ಆಗ್ತಿರೋದೇ ಹೆಚ್ಚು. ಕೊಡಗು ಜಿಲ್ಲಾಪಂಚಾಯತ್ ಹೋದ ವರ್ಷ ಕೊಡಗಿನ ಕಿತ್ತಳೆ ಹೆಸರಿನಲ್ಲಿ, ನಾಗಪುರದ ಕಿತ್ತಳೆ ಗಿಡಗಳನ್ನ ವಿತರಿಸಿದ್ದೇ ಇದಕ್ಕೆ ಉದಾಹರಣೆ.
ಮಡಿಕೇರಿಂದ ಕುಶಾಲನಗರಕ್ಕೆ ವಾಪಸ್ ಬರುವಾಗ ಸುಂಟಿಕೊಪ್ಪ ಹತ್ರ ಕಿತ್ತಳೆ ರಾಶಿ ನೋಡಿ, ಖರೀದಿಸೋಣ ಅಂತ ಅನ್ನಿಸ್ತು. ಗಾಡಿ ನಿಲ್ಲಿಸಿದ ಕೂಡ್ಲೇ ನಮ್ಮನ್ನ ನೋಡಿದ ಅಂಗಡಿಯವನು, `ಇದು ಸಕಲೇಶಪುರದ ಕಿತ್ತಳೆ ಸಾ..' ಅಂತ ಹೇಳಿ, ಅವನಾಗಿಯೇ ಮೂಸುಂಬಿ ತೆಗೆದುಕೊಟ್ಟ... ಸಿಹಿ ಸಿಹಿ ಮೂಸುಂಬಿ ತಿನ್ನವಾಗ `ನಂಜನಗೂಡಿನ ರಸಬಾಳೆ, ತಂದಿಹೆ ಕೊಡಗಿನ ಕಿತ್ತಳೆ' ಅನ್ನೋ ಪದ್ಯ ನೆನಪಾಯ್ತು. ಹಾಗಾಗಿ ಇದನ್ನೆಲ್ಲಾ ಬರೆಯಬೇಕಾಯ್ತು

No comments: