Sunday 11 December 2011

ಪ್ರಾನ್ಸ್ ನ `ಪರಶುರಾಮ'


ಇಲ್ಲಿ ಮಕ್ಕಳ ಮಧ್ಯೆ ಕೂತಿದ್ದಾರಲ್ಲ, ಇವ್ರು ಫ್ರಾನ್ಸ್ನ ಜೋಡಿ. ಭಾರತದ ಬಗ್ಗೆ ಹುಚ್ಚು ಅಭಿಮಾನ ಇಟ್ಟುಕೊಂಡಿರುವವರು. ಇಡೀ ಭಾರತವನ್ನ ಇಂಚಿಂಚೂ ತಿಳ್ಕೊಳ್ಬೇಕು ಅನ್ನೋದು ಇವ್ರ ಆಸೆ. ಅದಕ್ಕಾಗಿ ತಾಯಿ ನೆಲವನ್ನ ಬಿಟ್ಟು ಬಂದಿದ್ದಾರೆ. ನಮ್ಮ ದೇಶವನ್ನ ಅವ್ರು ಕಾಲುನಡಿಗೆಯಲ್ಲೇ ಸುತ್ತುತ್ತಿದ್ದಾರೆ. ಹಾಗೆ ಸದ್ಯ ಕುಶಾಲನಗರದಲ್ಲಿ ಈ ಜೋಡಿಯ ವಾಸ್ತವ್ಯ. ಇಲ್ಲಿಗೆ ಬರೋಕೆ ಮೊದ್ಲು ಗೋವಾದಲ್ಲಿ ಇದ್ದ್ರು. ಅಲ್ಲಿಂದ ಉಡುಪಿ ಮಂಗಳೂರು ಮಾರ್ಗವಾಗಿ ಮಡಿಕೇರಿಗೆ ಬಂದು ಈಗ ಕುಶಾಲನಗರ ತಲುಪಿಕೊಂಡಿದ್ದಾರೆ. ಈ ಜೋಡಿಗೆ ಯಾಕೋ ಗೋವಾ ಇಷ್ಟ ಆಗ್ಲಿಲ್ವಂತೆ. ಬಹುಶ: ಅದೇ ಬಿಳಿತೊಗಲಿನವರು ಬಟ್ಟೆಬಿಚ್ಚಿಕೊಂಡು ಗೋವಾದ ಸಮುದ್ರದಂಡೆಯ ಮರಳಿನ ಮೇಲೆ ಬಿದ್ದು ಹೊರಳಾಡೋದನ್ನ ನೋಡಿ, ಇವ್ರಿಗೆ ತಮ್ಮ ದೇಶದ ನೆನಪಾಗಿರಬೇಕೇನೋ... ಗೋವಾ ಒಂದು ಜಾಗ ಬಿಟ್ಟ್ರೆ ಇವ್ರ ಬಾಯಲ್ಲಿ ಬರೋದು `ವಿ ಲವ್ ಇಂಡಿಯಾ' ಅಂತನೇ...
ಅಂದ ಹಾಗೆ ಈ ಗಂಡಸಿನ ಹೆಸ್ರು. ಜಾನ್... ಈಕೆ ಅವ್ನ ಹೆಂಡತಿ, ಅದೆಂಥದ್ದೋ ಕ್ರಿಶ್ಚಿಯನ್ ಹೆಸ್ರು, ನೆನಪಿಗೆ ಬರ್ತಿಲ್ಲ. ಹೌದು, ಇದು ಕ್ರಿಶ್ಚಿಯನ್ ಜೋಡಿ. ಇವ್ರ ಸ್ವಂತ ನೆಲ ಫ್ರಾನ್ಸ್ನಲ್ಲಿ ಒಂದು ರಾತ್ರಿ ಚಚರ್್ನಲ್ಲಿ ಉಳ್ಕೊಳ್ತೀವಿ ಅಂದ್ರೆ, ಅಲ್ಲಿಂದ ಓಡಿಸಿ ಬಿಡ್ತಿದ್ದ್ರಂತೆ. ಆದ್ರೆ ಭಾರತದಲ್ಲಿ ಹಾಗಿಲ್ಲ ಅನ್ನೋದೇ ಇವ್ರ ಖುಷಿಗಳಲ್ಲಿ ಒಂದು. ದೇವಸ್ಥಾನ, ಮಂದಿರ, ಮಸೀದಿ ಕೊನೆಗೆ ಬೀದಿ ಬದಿಯ ಯಾರದ್ದೋ ಮನೆ... ಹೀಗೆ ಎಲ್ಲಿಯಾದ್ರೂ ಸರಿ ಒಂದು ರಾತ್ರಿ ಉಳ್ಕೊಳ್ಳೋದಿಕ್ಕೆ ಯಾವುದೇ ತೊಂದರೆ ಆಗಿಲ್ಲವಂತೆ. ಹೀಗೆ ಪಾದಯಾತ್ರೆ ಮಾಡ್ತಿರ್ಬೇಕಾದ್ರೆ, ರಾಜಸ್ತಾನದ ಜೈಪುರ ಹತ್ರ ಮರಳುಗಾಡಿನ ಹಳ್ಳಿ ಒಂದ್ರಲ್ಲಿ ಇವ್ರಿಗೆ ರಾತ್ರಿ ಕಳೀಬೇಕಾಗಿ ಬಂತು. ಎಲ್ಲೋ ಒಂದು ಪುಟ್ಟ ಗುಡಿಸಲು ಕಂಡಾಗ ಅಲ್ಲಿಯೇ ಇವ್ರು ಆಶ್ರಯ ಕೇಳಿದ್ದಾರೆ. ಜಠರವನ್ನೇ ಕರಗಿಸುವಂತ ಹಸಿವು ಬೇರೆ. ಆ ಗುಡಿಸಲು ನೋಡಿದರೆ ಸಾಕು, ಅದರ ಮನೆ ಯಜಮಾನ ಎಂಥ ಬಡತನದಲ್ಲಿ ಇದ್ದಾನೆ ಅನ್ನೋದು ಕಣ್ಣುಮುಂದೆ ಬರ್ತಿತ್ತು. ಅಂತ ಪರಿಸ್ಥಿತಿಲೂ `ಅತಿಥಿ ದೇವೋಭವ' ಅಂತ ಈ ಫ್ರಾನ್ಸ್ ಜೋಡಿಯನ್ನ ಉಪಚರಿಸಿದ್ದಾನೆ. ಈ ವಿಷಯ ಹೇಳ್ಬೇಕಾದ್ರೆ ಜಾನ್ ದಂಪತಿ ಕಣ್ಣಲ್ಲಿ ನೀರು ತೊಟ್ಟಿಕ್ಕುತ್ತೆ.
ಜಾನ್ ಹತ್ರ ಇರೋ ಸಂಪತ್ತು ಒಂದು ವೀಡಿಯೋ ಕೆಮೆರಾ ಮತ್ತೆ ಎರಡು ಕೊಳಲುಗಳು. ಜಾನ್ ತುಂಬಾ ಚೆನ್ನಾಗಿ ಕೊಳಲು ಊದ್ತಾನೆ. ಇದನ್ನೂ ಅವ್ನು ಕಲಿತಿದ್ದು ಭಾರತದಲ್ಲಿ. ಮೊನ್ನೆ ಕಣಿವೆಯ ಭಾರದ್ವಾಜ್ ಅವ್ರ `ಕಂದಕ' ಬಿಡುಗಡೆ ಸಮಾರಂಭದಲ್ಲಿ ಪ್ರಾರ್ಥನೆ ಇರ್ಲಿಲ್ಲ. ಬದ್ಲಿಗೆ ಜಾನ್ನ ಕೊಳಲುವಾದನ ಕಾರ್ಯಕ್ರಮ ಇತ್ತು. ಆತನ ತನ್ಮಯತೆಯ ಕೊಳಲು ನುಡಿಸುವಿಕೆ ನಿಜಕ್ಕೂ ಅದ್ಭುತ.
ಇಂಥ ಜಾನ್ ಮತ್ತೆ ಅವ್ನ ಶ್ರೀಮತಿ ಈಗ ಕುಶಾಲನಗರದಿಂದ ಕ್ಯಾಲಿಕಟ್ ಕಡೆ ಹೊರಟಿದ್ದಾರೆ. ಯಥಾ ಪ್ರಕಾರ ಅದೇ ಕಾಲ್ನಡಿಗೆ... ಬಹುಶ: ಪರಶುರಾಮನ ಪಾದದ ಶಕ್ತಿ ಇವ್ರಿಬ್ರಿಗೆ ಸಿಕ್ಕಿರ್ಬೇಕೇನೋ... `ಆಲ್ ದಿ ಬೆಸ್ಟ್' ಅನ್ನೋದಷ್ಟೇ ನಮ್ಮ ಕಾಯಕ.