ಯಾರದ್ರೂ ಅದ್ನ ಅಲ್ಲಿ ಕಲ್ಲಲ್ಲಿ ಕಡೆದು ಇಟ್ರಾ... ಅಥ್ವಾ ನೀರು ಹರಿವ ರಭಸಕ್ಕೆ ಅಂಥದ್ದೊಂದು ಆಕೃತಿ ಹುಟ್ಟಿಕೊಳ್ತಾ ? ಏನೇ ಆದ್ರೂ, ಅದು ಒಂದು ಸುಂದರ ರೂಪ. ಥೇಟ್ ಹಾವಿನ ಹೆಡೆ...ಅದ್ರ ಮೇಲಿಂದ ಧುಮ್ಮಿಕ್ಕೋ ಜಲಧಾರೆ...ಶಿವನ ಮುಡಿಯಿಂದ ಗಂಗೆ ಇಳಿದುಬಂದ ಹಾಗೆ ಅಂತ ಬೇಕಿದ್ರೂ ಹೇಳಿ...
ನಾನು ಹೇಳ್ತಿರೋದು ನಾಗತೀರ್ಥದ ಬಗ್ಗೆ. ಹೌದು, ನಾಗತೀರ್ಥ ಭಾಗಮಂಡಲ ಹತ್ತಿರ ಇರೋ, ತುಂಬಾ ಜನರಿಗೆ ಗೊತ್ತಿಲ್ಲದ ಜಾಗ. ಕಾವೇರಿ ಪುರಾಣದಲ್ಲಿ ನಾಗತೀರ್ಥದ ಪ್ರಸ್ತಾಪ ಬರುತ್ತೆ. ಅಗಸ್ತ್ಯ ಋಷಿ ಮೇಲೆ ಸಿಟ್ಟು ಮಾಡ್ಕೊಂಡು ಕಾವೇರಿ, ನದಿಯಾಗಿ ಹೊರಡ್ತಾಳೆ. ಆಗ ಇದೇ ನಾಗತೀರ್ಥದಲ್ಲಿ ಹಾವುಗಳು ಕಾವೇರಿಯನ್ನ ತಡೆಯುತ್ತವಂತೆ. ಆದ್ರೂ ಕಾವೇರಿ ಇಲ್ಲಿಂದ ಮುಂದಕ್ಕೆ ಹರೀತ್ತಾಳೆ. ಈ ನಾಗತೀರ್ಥದ ಮೂಲಕ ಹರಿದು ಬರೋದ್ರಿಂದ ಕಾವೇರಿಯ ನೀರು ನಂಜಾಗಿರುತ್ತಂತೆ. ಗಾಯಕ್ಕೆ ಮುಟ್ಟಿದ್ರೆ ಬೇಗ ಗುಣವಾಗೋಲ್ವಂತೆ... ಇದೆಲ್ಲಾ ನಂಬಿಕೆ. ಅದರ್ಲಿ, ನಾಗತೀರ್ಥದ ಬಗ್ಗೆ ಹೇಳ್ತಿದ್ದೆ ಅಲ್ವಾ ?
ಸ್ಕೂಲ್ಗೆ ಹೋಗುವಾಗ ಆಗಾಗ್ಗೆ ನಾವು ನಾಗತೀರ್ಥದ ಬಗ್ಗೆ ಕೇಳ್ತಿದ್ವಿ. ಅದು ಕೋಳಿಕಾಡುಗೆ ಹತ್ರ ಅಂತ ಗೊತ್ತಿತ್ತು. ತಿಮ್ಮಯ್ಯ, ಬೆಳ್ಯಪ್ಪ ಇನ್ನೊಂದೆರಡು ಮೂರು ಜನ ಅಲ್ಲಿಂದ ನಮ್ಮ ಸ್ಕೂಲ್ಗೆ ಬತರ್ಿದ್ದ್ರು. ಹಾಗಾಗಿ ಅವ್ರ ಜೊತೇಲಿ ಹೋದ್ರೆ ನಾಗತೀರ್ಥ ನೋಡ್ಬಹುದು ಅನ್ನೋ ಆಸೆ ಹುಟ್ಟಿಕೊಳ್ತು. ಅವ್ರಿಗೆ ಇದನ್ನ ಹೇಳಿದಾಗ ಜೋರಾಗಿ ನಗಾಡೋಕೆ ಶುರು ಮಾಡಿದ್ರು. `ಹೊಳೆ ಒಳಗೆನೇ ಮೂರು ಮೈಲು ನಡೀಬೇಕು..ಹಾವುಗಳು ಬೇರೆ ಇರ್ತವೆ... ನಿಮ್ಕೈಲೆಲ್ಲಾ ಇದು ಆಗೋದಿಲ್ಲ ಬಿಡಿ...' ಅಂತ ಕೋಳಿಕಾಡಿನ ಆ ಗೆಳೆಯರು ಹೇಳಿಬಿಟ್ರು. ನಮ್ಗೆ ಇದೊಂಥರ ಅವಮಾನ ಅನ್ನಿಸ್ತು. ಯಾಕೆ ಆಗೋದಿಲ್ಲ ನೋಡೇಬಿಡೋಣ ಅಂತ, ಒಂದು ಭಾನುವಾರ ಬೆಳಗ್ಗೆ ತಲಕಾವೇರಿಗೆ ಹೋಗೋ ಆನೇಕಲ್ ಬಸ್ ಹತ್ತಿ ಕೋಳಿಕಾಡಲ್ಲಿ ಇಳಿದೇಬಿಟ್ವಿ...
ಭಾಗಮಂಡಲದಲ್ಲಿ ನಮ್ಮದೊಂದು ಗೆಳೆಯರ ಟೀಮ್ ಇತ್ತು. ನಾನು, ಗುರು, ರವಿ, ಶ್ಯಾಂ, ಕಿರಣ, ಅರುಣ, ಅನಂತ, ಮುನ್ನ... ದೊಡ್ಡ ಬಳಗ. ರಜೆ ಬಂತಂದ್ರೆ ಮನೇಲಿ ಇರೋರೇ ಅಲ್ಲ ನಾವು. ತಾವೂರು ಬೆಟ್ಟ, ಬ್ರಹ್ಮಗಿರಿ, ವಿಂಡ್ಮಿಲ್ ಬೆಟ್ಟ ಎಲ್ಲಾ ಆವಾಗ್ಲೇ ನಮ್ಮ ಮುಂದೆ ಚಿಕ್ಕವಾಗಿಬಿಟ್ಟಿದ್ದವು ! ನಾವು ಎಲ್ಲಿ ಹೋಗ್ತಿದ್ದೀವೀಂತ ಮನೇಲಿ ಹೇಳ್ತಿರ್ಲಿಲ್ಲ. ಹೇಳಿದ್ರೆ, ಹೋಗೋಕೆ ಬಿಡ್ತಿರ್ಲಿಲ್ಲ.... ಹಾಗೆ, ನಮ್ಮ ಮುಂದಿನ `ಸಾಹಸ ಯಾತ್ರೆ' ನಾಗತೀರ್ಥದ ಕಡೆಗೆ ಹೊರಟಿತ್ತು.
ಸರಿ, ಕೋಳಿಕಾಡಿನಲ್ಲಿ ಇಳಿದಾಯ್ತು... ನಾಗತೀರ್ಥಕ್ಕೆ ಹೋಗೋಕೆ ದಾರಿ ಗೊತ್ತಾಗ್ಬೇಕ್ಕಲ್ಲಾ... ಸೀದಾ ಬೆಳ್ಳಿಯಪ್ಪನ ಮನೆಗೆ ಹೋದ್ವಿ. ಅವ್ನ ಅಪ್ಪ ಗಂಗು ಅಲ್ಲೇ ಕೂತಿದ್ದ್ರು. ನಾವು ಬಂದ ವಿಷಯ ಗೊತ್ತಾಗ್ತಿದ್ದ ಹಾಗೆ, `ವಾಪಸ್ ಮನೆಗೆ ಹೋಗ್ತೀರೋ ಇಲ್ಲಾ, ನಿಮ್ಮ ಮನೆಗೆ ಹೋಗಿ ಹೇಳಲೋ' ಅಂತ ಧಮಕಿ ಹಾಕಿಬಿಟ್ಟ್ರು.... ಕೊನೆಗೆ ಹೇಗೋ ಅವರನ್ನ ಒಪ್ಪಿಸಿ, ಬೆಳ್ಳಿಯಪ್ಪ ಮತ್ತೆ ಅವ್ನ ಜೊತೆ `ದೊಡ್ಡವ್ರು' ಒಬ್ರನ್ನ ಕರ್ಕೊಂಡು ನಾಗತೀರ್ಥ ಯಾತ್ರೆ ಹೊರಟೇಬಿಟ್ಟೆವು....
ಬೆಳ್ಳಿಯಪ್ಪನ ಮನೇಂದ 50 ಮೀಟರ್ ದೂರ ಹೋದರೆ ಕಾವೇರಿ ನದಿ. ಅಲ್ಲಿ ಆಕೆಯ ಗಾತ್ರ ತುಂಬಾ ಚಿಕ್ಕದು. ಚಿಕ್ಕ ತೊರೆ ಇದ್ದ ಹಾಗೆ ಇದ್ದಾಳೆ. ಕಲ್ಲುಗಳು ತುಂಬಾ ಇವೆ. ನಂಜೊತೆ ಬಂದ `ದೊಡ್ಡವ್ರು' ನಮ್ಗೆಲ್ಲಾ ಒಂದೊಂದು ದೊಣ್ಣೆ ಕಡಿದುಕೊಟ್ಟ್ರು. ಚಪ್ಪಲಿ ಬಿಚ್ಚಿ ಕೈನಲ್ಲಿ ಹಿಡ್ಕೋಳೋಕೆ ಹೇಳಿದ್ರು. ಈ ಸಿದ್ಧತೆ ನೋಡ್ದಾಗ ಯಾಕೋ ಸ್ವಲ್ಪ ಹೆದ್ರಿಕೆ ಶುರುವಾಯ್ತು....ಮುಂದೆ ಏನು ಕಾದಿದೆಯಪ್ಪ ಅಂತ ನಾವೆಲ್ಲಾ ಮುಖಮುಖ ನೋಡಿಕೊಂಡ್ವಿ....
ನದಿಗೆ ಇಳಿದ ಕೂಡ್ಲೇ ಗೊತ್ತಾಯ್ತು... ಬೆಳ್ಯಪ್ಪ ಮತ್ತೆ ಟೀಮ್, ಅವ್ನ ತಂದೆ ಯಾಕೆ ಮೊದ್ಲೇ ಎಚ್ಚರಿಸಿದ್ದ್ರು ಅಂತ... ಕಾಲಿಟ್ಟಲೆಲ್ಲಾ ಜಾರುವ ಕಲ್ಲುಗಳು.. ಪಕ್ಕದಲ್ಲೇ ಪುಸಕ್ಕನೇ ಹಾದು ಹೋಗುವ ಚಿಕ್ಕಪುಟ್ಟ ಹಾವುಗಳು ! ಇನ್ನೂ ನಾಲ್ಕು ಹೆಜ್ಜೆ ಇಟ್ಟಿಲ್ಲ... ಆಗ್ಲೇ ನಮ್ಮಲ್ಲಿ ಕೆಲವ್ರು ಹಿಂದಕ್ಕೆ ಹೆಜ್ಜೆ ಇಡೋಕೆ ಶುರುಮಾಡಿದ್ರು! ಬೆಳ್ಯಪ್ಪ ಮುಸಿಮುಸಿ ನಗ್ತಿದ್ದ... ನಮ್ಮ ಕೈಲಿದ್ದ ಚಪ್ಪಲಿಗಳು ಕುತ್ತಿಗೆಗೆ ಹಾರ ಆಗಿದ್ವು ! ಶುರುವಾಯ್ತು ಯಾತ್ರೆ...ಸುಮಾರು ನಾಲ್ಕು ಕಿಲೋಮೀಟರ್ ನದಿಯೊಳಗಿನ ನಡಿಗೆ ! ಯಾಕಪ್ಪಾ ಬೇಕಿತ್ತು ಅನ್ನಿಸೋ ಹಾಗಿತ್ತು ಆ ಯಾತ್ರೆ.
ಅಂತೂ ನಾಗತೀರ್ಥ ತಲುಪಿಯೇ ಬಿಟ್ವು... ಆಹಾ! ನಮ್ಮ ಹತ್ತಿರದಲ್ಲೇ(?) ಎಷ್ಟು ಸುಂದರ ಜಾಗ... ಅಲ್ಲಿ ತಲುಪಿದ ಕೂಡ್ಲೇ ಎಲ್ಲರ ಆಯಾಸ ಮರೆಯಾಗಿತ್ತು. ಬ್ಯಾಗಿನಲ್ಲಿದ್ದ ಬಿಸ್ಕೆಟ್ ತಿಂದು, ಜ್ಯೂಸ್ ಕುಡ್ದು ಅಲ್ಲೇ ಕಲ್ಲು ಮೇಲೆ ಸ್ವಲ್ಪ ಹೊತ್ತು ಕೂತುಕೊಂಡ್ವಿ. ಅಷ್ಟು ಹೊತ್ತಿಗೆ ಅಪರಾಹ್ನ ಸುಮಾರು 3 ಗಂಟೆ ಆಗಿತ್ತು. ವಾಪಸ್ ಹೋಗೋ ಯೋಚ್ನೆ ಬರ್ತಿದ್ದ ಹಾಗೆ ಮತ್ತೆ ತಲೆನೋವು ಶುರುವಾಯ್ತು... ಅದು, ಮತ್ತೆ ಕಲ್ಲಿನಿಂದ ಕಲ್ಲಿಗೆ ಹಾರುತ್ತಾ, ಹಾವುಗಳಿಂದ ತಪ್ಪಿಸಿಕೊಳ್ತಾ ಕೋಳಿಕಾಡು ತಲುಪೋದು ಹೇಗೆ ಅನ್ನೋ ತಲೆನೋವು ! ಅಂತೂ ಮನೆಗೆ ಸುರಕ್ಷಿತವಾಗಿ ತಲುಪಿದಾಗ ರಾತ್ರಿ 8 ಗಂಟೆ ಆಗಿತ್ತು...
No comments:
Post a Comment