ಕೋಪಟ್ಟಿ ಬೆಟ್ಟ
ಕತ್ತಲ ರಾತ್ರಿ... ದೂರದಲ್ಲಿ ಮಿಂಚು ಹುಳ ಹಾರಾಡಿದಂತೆ ಕಾಣೋ ಮಡಿಕೇರಿಯ ಬೆಳಕು... ಮತ್ತೊಂದು ಕಡೆ ಸಂಪಾಜೆಯ ಘಟ್ಟ ಹತ್ತೋ, ಇಳಿಯೋ ಲಾರಿ - ಬಸ್ಗಳ ಏದುಸಿರು...ಹೆಡ್ಲೈಟ್ಗಳ ಪ್ರಕಾಶಮಾನ ಕೋಲು... ಫೆಬ್ರವರಿಯ ಚಳಿಗಾಳಿ ! ಇದು ಕೋಪಟ್ಟಿಬೆಟ್ಟದ ಮೇಲೆ ನಮಗಾದ ಅನುಭವ....
ನಾನಾಗ ಪಿಯುಸಿಯಲ್ಲಿದ್ದೆ. ಚೇರಂಬಾಣೆ ಅರುಣ ಜೂನಿಯರ್ ಕಾಲೇಜು ಎದುರು ನಿಂತು ನೋಡಿದ್ರೆ.... ದೂರದಲ್ಲಿ ಕಾಣುತ್ತೆ, ಕೋಪಟ್ಟಿಬೆಟ್ಟ. ಅದನ್ನ ನೋಡಿದಾಗೆಲ್ಲಾ ಅಲ್ಲಿಗೆ ಒಮ್ಮೆ ಹೋಗ್ಬೇಕಲ್ಲಾ ಅನ್ನೋ ಆಸೆ ಆಗ್ತಿತ್ತು... ಸ್ನೇಹಿತ್ರಿಗೆ ಹೇಳಿದಾಗ ಯಾರೂ ಇಂಟ್ರೆಸ್ಟ್ ತೋರಿಸಿರ್ಲಿಲ್ಲ... ಹಾಗಾಗಿ ಫಸ್ಟ್ ಪಿಯುಸಿಯಲ್ಲಿ ಕೋಪಟ್ಟಿ ಬೆಟ್ಟ ಹತ್ತೋ ಆಸೆ ಈಡೇರ್ಲಿಲ್ಲ. ಇನ್ನು ಸೆಕೆಂಡ್ ಪಿಯುಸಿಗೆ ಬಂದಕೂಡ್ಲೇ, ಕಾಲೇಜಿಗೆ ಕಾಣೋ ಆ ಬೆಟ್ಟ ಆಗಾಗ್ಗೆ ಕರೆದ ಹಾಗೆ ಆಗ್ತಿತ್ತು ! ಮಳೆ ಇದ್ರೆ ಬೆಟ್ಟಕ್ಕೆ ಚಾರಣ ಹೋಗೋದು ಆಗದ ಮಾತು. ಏಕಂದ್ರೆ ಅಲ್ಲಿ ನಮ್ಮ ಹೆಬ್ಬೆಟ್ಟು ಗಾತ್ರದ ಜಿಗಣೆಗಳು ರಕ್ತ ಹೀರೋದಿಕ್ಕೆ ಕಾದು ಕೂತಿರ್ತವೆ ! ಅಲ್ಲೆಲ್ಲಾ ಮಳೆಗಾಲ ಕಳೆಯೋದಿಕ್ಕೆ ಅಕ್ಟೋಬರ್ ತಿಂಗಳೇ ಬರಬೇಕು. ಮಳೆಗಾಲ ಮುಗೀತ್ತಿದ್ದ ಹಾಗೆ ಚಳಿಗಾಲವೂ ಶುರುವಾಗಿರುತ್ತೆ... ಹಾಗಾಗಿ ನನ್ನ ಆಸೆಗೆ ಒಂದಿಲ್ಲೊಂದು ಅಡ್ಡಿ ಎದುರಾಗ್ತಿತ್ತು. ಕೋಪಟ್ಟಿ ಬೆಟ್ಟಕ್ಕೆ ಹೋಗ್ಲೇಬೇಕು ಅನ್ನೋ ನನ್ನ ಆಸೆಗೆ ಅಷ್ಟುಹೊತ್ತಿಗೆ ಇನ್ನಿಬ್ಬರು ಸೇರ್ಕೊಂಡಿದ್ದ್ರು. ಚರಣ್ ಮತ್ತೆ ಸುಬ್ಬಯ್ಯ.... ಸುಬ್ಬಯ್ಯ ಒಂದು ಐಡಿಯಾ ಕೊಟ್ಟ. `ನಂ ಇಂಗ್ಲೀಷ್ ಲೆಕ್ಚರರ್ ರಾಮಕೃಷ್ಣ ಸರ್ ಮನೆ ಅದೇ ಕೋಪಟ್ಟಿಬೆಟ್ಟದ ಕೆಳಗೆ ಬರುತ್ತೆ. ಅವ್ರನ್ನ ಹೇಗಾದ್ರೂ ಮಾಡಿ ಒಪ್ಪಿಸಿದ್ರೆ, ನಮ್ಮ ದಾರಿ ಸುಗಮವಾಗುತ್ತೆ.' ರಾಮಕೃಷ್ಣ ಸರ್ ಸ್ಟಾಫ್ರೂಂನಿಂದ ಹೊರಗೆ ಬರೋದನ್ನೇ ಕಾದು, ನಾವು ತ್ರಿಮೂತರ್ಿಗಳು ವಿಷಯವನ್ನ ಅವ್ರ ಕಿವಿಗೆ ಹಾಕಿದ್ವಿ. ಅವ್ರೂ ಬರೋದಾಗಿ ಖುಷಿಯಿಂದ್ಲೇ ಒಪ್ಪಿಕೊಂಡ್ರು. ಆದ್ರೆ ಫೆಬ್ರವರಿ ತನಕ ಕಾಯೋದಿಕ್ಕೆ ತಿಳಿಸಿದ್ರು. ಯಾಕಂದ್ರೆ, ಆ ಬೆಟ್ಟ ಹತ್ತೋದಿಕ್ಕೆ ಅದೇ ಅದೇ ಸರಿಯಾದ ತಿಂಗಳು ಅಂತ ಅನುಭವಿಯಾದ ಅವ್ರ ಅಭಿಪ್ರಾಯ ಆಗಿತ್ತು.
ಅಂತೂ ಆ ಫೆಬ್ರವರಿ ಬಂತು. ಮೊದ್ಲು ಪ್ರಿನ್ಸಿಪಾಲ್ ಹತ್ರ ಪರ್ಮಿಷನ್ ತಕ್ಕೊಳಿ ಅಂತ್ರ ಸೂಚಿಸಿದ್ರು ರಾಮಕೃಷ್ಣ ಸರ್. ಯಾರು ಬರ್ತಾರೋ ಬಿಡ್ತಾರೋ... ನಂ ಕ್ಲಾಸಿನ ಎಲ್ಲಾ ಹುಡುಗ್ರ ಹೆಸ್ರನ್ನ ಬರ್ದು, ಪ್ರಿನ್ಸಿ ಮುಂದೆ ಇಟ್ವಿ. ಅವ್ರು ಒಂದಿಷ್ಟು ಸಲಹೆ ಕೊಟ್ಟು ಒಪ್ಪಿಗೆ ಸೂಚಿಸಿದ್ರು. ಕೂಡ್ಲೇ ನಮ್ ಚಾರಣಕ್ಕೆ ಒಂದು ಶನಿವಾರವನ್ನ ಆಯ್ಕೆ ಮಾಡ್ಕೊಂಡೆವು. ಆವತ್ತು ಮಧ್ಯಾಹ್ನ ಹೊರಟು ಬೆಟ್ಟದ ಮೇಲೆ ಹಾಲ್ಟ್ ಮಾಡೋದು, ಭಾನುವಾರ ಸಂಜೆ ವಾಪಸ್ ಬರೋದು ಅಂತ ತೀರ್ಮಾನ ಆಯ್ತು. ಸರ್, ನಾವು ಮೂವರು, ತಿಮ್ಮಯ್ಯ, ಸಚಿನ್ ಹೀಗೆ ಇನ್ನೋದು 10 ಹುಡುಗ್ರು ಬೆಟ್ಟ ಏರೋದಿಕ್ಕೆ ರೆಡಿ ಆದ್ವಿ. ನಾವ್ಯಾರೂ ವೃತ್ತಿಪರ ಚಾರಣಿಗರಲ್ಲ. ಹಾಗಾಗಿ ನಮ್ಮ ಸಿದ್ಧತೆಗಳೂ ವೃತ್ತಿಪರ ಆಗಿರ್ಲಿಲ್ಲ. ಅಂತೂ ನಮ್ಮ ಆಸೆ ಈಡೇರುವ ದಿನ ಬಂದೇ ಬಿಡ್ತು...
ಶನಿವಾರದ ಕ್ಲಾಸ್ಮುಗಿದ ಕೂಡ್ಲೇ ನಾವು, ಭಾಗಮಂಡಲ ಕಡೆ ಹೋಗೋ ರಾಮ ಬಸ್ ಹತ್ತಿ ಕೋಪಟ್ಟೀಲ್ಲಿ ಇಳಿದೆವು. ಸೀದಾ ನಮ್ ಸರ್ ಮನೆ ಕಡೆ ನಮ್ಮ ಪ್ರಯಾಣ. ಅಲ್ಲಿಂದ ಶುರುವಾಯ್ತು ನಿಜವಾದ ಚಾರಣ...ಸರ್ ತೋಟ ಅದೇ ಕೋಪಟ್ಟಿ ಬೆಟ್ಟಕ್ಕೆ ಹೋಗೋ ದಾರೀಲೇ ಇದೆ. ರಾತ್ರಿ ಅಡುಗೆ ಮಾಡಿಕೊಡೋಕೆ ಸರ್ ತೋಟದಲ್ಲಿ ಕೆಲಸ ಮಾಡೋ ಅಪ್ಪಿ ನಮ್ಮ ಜೊತೆ ಸೇರಿಕೊಂಡ. ಅವನ ಜೊತೆ ಅವ್ನ ಗೆಳೆಯ `ರಾಮು' ಕೂಡ ಇದ್ದ. ಅಂದ ಹಾಗೆ `ರಾಮು'ದ್ದು ಕೂಡ ಒಂದು ಒಳ್ಳೇ ಕಥೆ.
`ರಾಮು', ಅಪ್ಪ, ಅಮ್ಮನ ಜೊತೆ ಕಾಡಿನಲ್ಲೇ ಇದ್ದ. ಕಾಫಿ ತೋಟದಲೆಲ್ಲಾ ಸುತ್ತಾಡ್ತಾ ತುಂಬಾ ಮಜವಾಗಿ ಇದ್ದ. ಅವ್ನು ರುಚಿ ನೋಡದ ಕಾಡು ಹಣ್ಣುಗಳೇ ಇಲ್ಲ. ಅಂಥ `ರಾಮು'ನ ಅವ್ನ ಅಪ್ಪ, ಅಮ್ಮ ಮತ್ತೆ ಜೊತೆಗಾರರೆಲ್ಲಾ ಕಾಫಿ ತೋಟದಲ್ಲೇ ಬಿಟ್ಟು ಎಲ್ಲಿಗೋ ಹೋಗಿಬಿಟ್ರು. ಅಗ ದಿಕ್ಕಿ ಕಾಣದೇ ಕೂತಿದ್ದ `ರಾಮು'ಗೆ ದಿಕ್ಕಾಗಿದ್ದು, ಅಪ್ಪಿ. `ರಾಮು' ಅಪ್ಪಿಗೆ ಸಿಗೋ ಮೊದ್ಲು ಅದೊಂದು ಮಂಗ. ನಂತರ `ರಾಮು'ನ ಅಪ್ಪಿ ಯಾವತ್ತೂ ಮಂಗ ಅಂತ ನೋಡಲೇ ಇಲ್ಲ. ಅಂಥ `ರಾಮು' ಕೋಪಟ್ಟಿಬೆಟ್ಟ ಚಾರಣಕ್ಕೆ ನಮ್ಮ ಜೊತೆ ಸೇರಿಕೊಂಡಿದ್ದ. ಸ್ವಲ್ಪ ಹೊತ್ತಲ್ಲೇ ಎಲ್ಲರ ಜೊತೆಯೂ ಹೊಂದಿಕೊಂಡ. ಅದರಲ್ಲೂ `ರಾಮು'ಗೆ, ಚರಣ್ ಅಂದ್ರೆ ತುಂಬಾ ಇಷ್ಟ ಆಗಿಬಿಟ್ಟ.
ಅಪ್ಪಿ ಮನೇಂದ ಕೋಪಟ್ಟಿಬೆಟ್ಟಕ್ಕೆ ಏರು ಹಾದಿ.... ಎರಡು ಚಿಕ್ಕಬೆಟ್ಟಗಳನ್ನ ಹತ್ತಿ ಇಳೀಬೇಕು. ಆಮೇಲೆ ಸಿಗುತ್ತೆ ಕೋಪಟ್ಟಿಬೆಟ್ಟ. ಕೆಳಗೆ ಕಾಫಿತೋಟ... ಮೇಲಕ್ಕೆ ಹೋದಹಾಗೆ...ದಟ್ಟ ಕಾಡು... ಇನ್ನು ಮೇಲಕ್ಕೆ ಹೋದ್ರೆ ಕಾಡು ನಿಧಾನವಾಗಿ ಮರೆಯಾಗಿ ಹುಲ್ಲುಗಾವಲು ಶುರುವಾಗುತ್ತೆ. ಅದೊಂಥರ ಆಳೆತ್ತರ ಬೆಳೆಯೋ ಹುಲ್ಲು. ಆನೆಹುಲ್ಲು ಅಂತ ಅದ್ನ ಕರೀತಾರೆ. ಆನೆಗಳು ಅದ್ರ ಮಧ್ಯೆ ಇದ್ದ್ರೆ ಗೊತ್ತೇ ಆಗೋಲ್ಲ. ಅಲ್ಲಿಂದ ಮುಂದಕ್ಕೆ ಒಂದು ದಾರಿ ಇದೆ. ಅದ್ನ ನೋಡಿದ್ಕೂಡ್ಲೇ ವಾಪಸ್ ಹೋಗಿಬಿಡೋಣ್ವ ಅನ್ನಿಸಿಬಿಡ್ತು. ಏಕಂದ್ರೆ, ಅದೊಂದು ದೊಡ್ಡ ಬಂಡೆಯಲ್ಲಿ ಕೊರೆದಿರೋ ದಾರಿ. ಒಂದಡಿ ಅಗಲ ಇರ್ಬಹುದು ಅಷ್ಟೇ....ಕೆಳಗೆ ಪ್ರಪಾತ... ಬಿದ್ರೆ ವಾಪಸ್ `ಕುಕ್ಕೇಲಿ ತುಂಬಿಸಿಕೊಂಡು' ಬರ್ಬೇಕು.... ಬೆಟ್ಟದ ಇನ್ನೊಂದು ಬದಿಗೆ ಹೋಗೋದಿಕ್ಕೆ ಇರೋದು ಇದೊಂದೇ ದಾರಿ. ಅಶ್ಚರ್ಯ ಅಂದ್ರೆ ಇದೇ ದಾರೀಲಿ ಆನೆಗಳ ಹಿಂಡು ದಾಟಿ ಬಂದು ಕೋಪಟ್ಟಿಯಲ್ಲಿ ಬಾಳೆ ತೋಟ ಧ್ವಂಸ ಮಾಡ್ತವೆ. ಆನೆಗಳ ಅಷ್ಟು ದೊಡ್ಡ ಬಾಡಿಯೇ ಇಲ್ಲಿ ದಾಟಿದ್ಮೇಲೆ ನಮ್ದೇನು ಮಹಾ ಅಂತ, ಜೀವ ಕೈಲಿ ಹಿಡಿದ್ಕೊಂಡು ಅಂತೂ ಆ ದಾರೀನ ನಿಧಾನಕ್ಕೆ ದಾಟಿ ಯುದ್ಧ ಗೆದ್ದಹಾಗೆ ಸಂಭ್ರಮಿಸಿದೆವು! ಇಲ್ಲಿಗೆ ಮುಗೀಲಿಲ್ಲ, ಚಾರಣ...
ಸುಮಾರು 70 ಡಿಗ್ರಿ ಓರೆಯಾಗಿರೋ ಬೆಟ್ಟವನ್ನ ಮತ್ತೆ 2 ಗಂಟೆ ಕಾಲ ಏದುಸಿರು ಬಿಡುತ್ತಾ ಏರಿದೆವು.... ಬೆಟ್ಟದ ತುದಿ ತಲುಪೋದಿಕ್ಕೆ ಇದ್ದಿದ್ದು ಬರೀ 300 ಮೀಟರ್ ಮಾತ್ರ. ಆದ್ರೆ, ದಾರಿ ಹಾಗಿತ್ತು ! ಅಂತೂ ಬೆಟ್ಟದ ತುದಿ ತಲುಪುವಾಗ ಸಂಜೆ ಐದೂವರೆ ಗಂಟೆ.... ಅಲ್ಲಿ ಜೋರು ಗಾಳಿ. ಒಂದು ಗಟ್ಟಿಯಾದ ಟೆಂಟ್ ಹಾಕ್ಬೇಕಾದ್ರೆ ಸಾಕುಬೇಕಾಯ್ತು. ರಾತ್ರಿ ಆಗ್ತಿದ್ದ ಹಾಗೆ ಚಳಿಯ ಪ್ರಮಾಣವೂ ಜೋರಾಯ್ತು. ಕ್ಯಾಂಪ್ ಫೈರ್ ಹಾಕಿಕೊಂಡು ಕೂತ್ರೂ, ಹಾಡು ಹೇಳಿಕೊಂಡು ಕುಣಿದಾಡಿದ್ರೂ ಚಳಿ ಮಾತ್ರ ಕಡಿಮೆ ಆಗಿಲ್ಲ. ಇದ್ರ ಜೊತೆ ಇನ್ನು ಕೆಲವು ಕಣ್ತುಂಬಿಸಿಕೊಳ್ಳೋ ಅಂಶಗಳೂ ಇದ್ದ್ವು! ಸೂಯರ್ಾಸ್ತದ ಆ ಸುಂದರ ನೋಟ... ದೂರದಲ್ಲಿ ಕಾಣೋ ಮಡಿಕೇರಿಯ `ದೀಪಾವಳಿ'... ಸಂಪಾಜೆ ಘಾಟ್ನಲ್ಲಿ ಓಡಾಡೋ ವಾಹನಗಳ ಬೆಳಕು....ಪ್ರಪಾತದಲ್ಲೆಲ್ಲೋ ಘೀಳಿಡ್ತಿರೋ ಆನೆ ಹಿಂಡು.. ಇದರ ಬೆನ್ನಲ್ಲೇ ಊಳಿಡೋ ನರಿಗಳು..ಅಬ್ಬಾ! ಮಧ್ಯಾಹ್ನದಿಂದ ಪಟ್ಟ ಕಷ್ಟ ಎಲ್ಲಾ ಕಳೆದುಹೋದ ಅನುಭವ! ಬೆಳಗ್ಗೆಯೂ ಹಾಗೆ, ಮೈ ನಡುಗಿಸೋ ಚಳಿ ಇದ್ದ್ರೂ, ಸೂರ್ಯೋದಯ ನೋಡ್ಬೇಕು ಅನ್ನೋ ಆಸೆಯಿಂದ ಟೆಂಟ್ನಿಂದ ಹೊರಗೋಡಿ ಬಂದು ಆ ನೋಟವನ್ನ ಕ್ಯಾಮೆರಾದಲ್ಲಿ ಸೆರೆಹಿಡ್ಕೊಂಡ್ವಿ..... ಭಾನುವಾರ ಮಧ್ಯಾಹ್ನವರೆಗೆ ಅಲ್ಲಿ ಕಳೆದು, ನಿಧಾನಕ್ಕೆ ಬೆಟ್ಟ ಇಳಿಯೋದಿಕ್ಕೆ ಶುರುಮಾಡಿದ್ವಿ...
No comments:
Post a Comment