ತಲಕಾವೇರಿಲಿ ಬ್ರಹ್ಮಗಿರಿ ಬೆಟ್ಟ ಹತ್ತಿ ದೂರಕ್ಕೆ ಒಮ್ಮೆ ಕಣ್ಣಾಡಿಸಿದ್ರೆ, ಸ್ಟ್ಯಾಂಡಿಂಗ್ ಫ್ಯಾನ್ನಂಥ ಆಕೃತಿಗಳು ಕಾಣೋದಿಕ್ಕೆ ಸಿಕ್ತವೆ. ಅದು, ವಿಂಡ್ಮಿಲ್.... ವಿದ್ಯುತ್ ಉತ್ಪಾದನೆಗೆ ಅಂತ 80ರ ದಶಕದಲ್ಲಿ ಇವುಗಳನ್ನ ಇಲ್ಲಿ ಶುರುಮಾಡಿದ್ದ್ರು. ಒಂದು ವರ್ಷ ಅಷ್ಟೇ ಈ ವಿಂಡ್ಮಿಲ್ಗಳು ಕೆಲಸ ಮಾಡಿದ್ದು. ಮುತ್ತಿನಹಾರ ಫಿಲಂ ಶೂಟಿಂಗ್ ನಡಿವಾಗ ಇದು ಸರಿಯಾಗಿತ್ತು. `ಮಡಿಕೇರಿ ಸಿಪಾಯಿ...' ಹಾಡಿನ ದೃಶ್ಯಗಳಲ್ಲಿ ಇದನ್ನ ನೋಡ್ಬಹುದು. ಆದ್ರೆ ನಾನು ಈಗ ಹೇಳೋಕೆ ಹೊರಟಿರೋದು ವಿಂಡ್ಮಿಲ್ನ ಕಥೆ ಅಲ್ಲ, ಅಲ್ಲೇ ಇರೋ ಬಾಪರೆಮೊಟ್ಟೆ ಅನ್ನೋ ಅಚ್ಚರಿ ಬಗ್ಗೆ..
ಬ್ರಹ್ಮಗಿರಿ ಬೆಟ್ಟ ಸಾಲಿನಲ್ಲೇ ಬರೋ ನಾಲ್ಕೈದು ಗುಡ್ಡಗಳ ಮೇಲೆ ಗಾಳಿಯಂತ್ರಗಳನ್ನ ಇಟ್ಟಿದ್ದಾರೆ. ಈಗ ಇದೊಂಥರ ಪಳೆಯುಳಿಕೆ ಆಗಿ ನಿಂತುಬಿಟ್ಟಿದೆ. ಈ ಗುಡ್ಡಗಳ ಮತ್ತೊಂದು ಬದಿಯಲ್ಲೇ ಇರೋದು, ಬಾಪರೆಮೊಟ್ಟೆ. ಈ ಜಾಗದ ಬಗ್ಗೆ ಇರೋದು ಬರೀ ಅಂತೆಕಂತೆಗಳ ಕಥೆ ಅಷ್ಟೇ... ಅಲ್ಲಿ ಏನು ಇದೆ ಅನ್ನೋದನ್ನ ಹೋಗಿ ನೋಡಿದವರು ಯಾರೂ ಇದ್ದ ಹಾಗಿಲ್ಲ. ಅದೊಂದು ದೊಡ್ಡ ಗುಹೆ. ಬೆಟ್ಟದ ಬುಡದಲ್ಲೇ ಅದರ ದ್ವಾರ. ತಲಕಾವೇರಿ ಹತ್ತಿರದ ಚೇರಂಗಾಲ, ತಣ್ಣಿಮಾನಿ ಗ್ರಾಮಗಳಲ್ಲಿ ಆಗಾಗ್ಗೆ ಹುಲಿಗಳು ದಾಳಿ ಮಾಡ್ತಿರ್ತವೆ. ಕಾಡಿನಲ್ಲಿ ಮೇಯೋಕೆ ಹೋದ ದನಕರುಗಳು ಹುಲಿಗೆ ಬಲಿಯಾಗೋದು ಇಲ್ಲೆಲ್ಲಾ ಮಾಮೂಲು... ಇಲ್ಲಿನ ಜನಗಳು ನಂಬೋ ಪ್ರಕಾರ, ತಮ್ಮೂರಿಗೆ ಬರೋ ಹುಲಿಗಳು ವಾಸ ಮಾಡೋದು, ಇದೇ ಬಾಪರೆಮೊಟ್ಟೆ ಗುಹೇಲಿ !
ಒಬ್ಬ ವ್ಯಕ್ತಿ ಸಲೀಸಾಗಿ ನಡೆಯಬಹುದಾದ ಗುಹೆ ಅದು...ಸುಮಾರು 100 ಮೀಟರ್ ಉದ್ದಕ್ಕೆ ಸುರಂಗ ರೀತಿ ಇದೆ. ನಂತರ ಅದು ಬಾವಿಯ ರೂಪ ಪಡೆಯುತ್ತಂತೆ ! ಕೆಲವು ಧೈರ್ಯವಂತ ಹಳ್ಳಿಗರು ಈ ಸುರಂಗದೊಳಕ್ಕೆ ಹೋಗಿ ಬಾವಲಿಯ ಹಿಕ್ಕೆ ಸಂಗ್ರಹಿಸಿ ತರೋದೂ ಇದೆ. ಹಾಗಂತ ಅವ್ರೇನೂ ತುಂಬಾ ದೂರ ಏನೂ ಹೋಗೋದಿಲ್ಲ. ಸೂರ್ಯನ ಬೆಳಕು ಎಲ್ಲಿವರೆಗೆ ಬೀಳುತ್ತೋ ಅಲ್ಲಿ ತನಕ ಮಾತ್ರ ಅವ್ರ ಧೈರ್ಯ! ಭತ್ತದ ಬೆಳೆ ಕಟಾವು ಆದ್ಮೇಲೆ ಬೆಳೆಯೋ ಮೆಣಸಿನ ಗಿಡಕ್ಕೆ ಈ ಬಾವಲಿ ಹಿಕ್ಕೆ ಒಳ್ಳೇ ಗೊಬ್ಬರ!
ಬಾಪರೆಮೊಟ್ಟೆ ಗುಹೆ ಬಗ್ಗೆ ತುಂಬಾ ನಂಬಿಕೆಗಳಿವೆ. ಚೇರಂಗಾಲ ಮೂಲೆಯಿಂದ ಬರ್ತಿದ್ದ ಗೆಳೆಯ ಕೋಡಿ ಮಹೇಶ ಈ ಬಾಪರೆ ಮೊಟ್ಟೆ ಗುಹೆ ಬಗ್ಗೆ ತುಂಬಾ ಕಥೆಗಳನ್ನ ಹೇಳ್ತಿದ್ದ. ನಾವೆಲ್ಲಾ ಬಿಟ್ಟ ಬಾಯಿ ಬಿಟ್ಟ ಹಾಗೆ ಅದನ್ನೆಲ್ಲಾ ಕೇಳ್ತಿದ್ವಿ. ಅವ್ರ ಅಜ್ಜ ಕೋವಿ ಹಿಡ್ಕೊಂಡು ಆಗಾಗ್ಗೆ ಬೇಟೆಗೆ ಹೋಗ್ತಿದ್ದ್ರು. ಒಂದೊಂದು ಸಲ ಯಾವುದೇ ದೊಡ್ಡ ಪ್ರಾಣಿಗಳು ಸಿಗ್ತಿರ್ಲಿಲ್ಲ. ಬರೀ ಕೈನಲ್ಲಿ ಮನೆಗೆ ಹೋಗ್ಬೇಕಲ್ಲಾ ಅಂತ ಅವ್ರು, ಬಾಪರೆಮೊಟ್ಟೆ ಗುಹೆಗೆ ನುಗ್ಗಿ ಬಾವಲಿ ಹೊಡ್ಕೊಂಡು ಬರ್ತಿದ್ರಂತೆ. ಬಾಪರೆ ಮೊಟ್ಟೆ ಗುಹೆ ಒಳಗೆ ತುಂಬಾ ಕವಲುಗಳಿವೆಯಂತೆ... ಒಳಕ್ಕೆ ನುಗ್ಗಿದವ್ರಿಗೆ ಹೊರಗೆ ಬರೋಕೆ ದಾರಿಯೇ ಗೊತ್ತಾಗಲ್ವಂತೆ ! ಅದಕ್ಕೆ ನಮ್ಮ ಮಹೇಶನ ಅಜ್ಜ ಮತ್ತೆ ಅವ್ರ ಜೊತೆಯವ್ರು ಗುಹೆ ಒಳಗೆ ನುಗ್ಬೇಕಾದ್ರೆ ಮುನ್ನೆಚ್ಚರಿಕೆ ತೆಗೆದುಕೊಳ್ತಿದ್ದ್ರು. ಹೊರಗಿನ ಒಂದು ಗಿಡಕ್ಕೆ ದಾರ ಕಟ್ಟಿ, ಅದನ್ನ ಹಿಡ್ಕೊಂಡು ಗುಹೆ ಒಳಕ್ಕೆ ಹೋಗ್ತಿದ್ದ್ರಂತೆ. ಮತ್ತೆ ಅದನ್ನೇ ಹಿಡ್ಕೊಂಡು ಹೊರಕ್ಕೆ ಬರ್ತಿದ್ದ್ರಂತೆ.
ತಲಕಾವೇರಿಗೆ ಕೇರಳ ಹತ್ರವಾಗುತ್ತೆ. 30 ಕಿಲೋಮೀಟರ್ ಕಚ್ಚಾ ದಾರೀಲಿ ಹೋದ್ರೆ, ಕೇರಳದ ಮುಂಡ್ರೋಟು ಅನ್ನೋ ಊರು ಸಿಗುತ್ತೆ. ಈ ಬಾಪರೆಮೊಟ್ಟೆಯ ಗುಹೆ ಇದ್ಯಲ್ಲಾ...ಇಲ್ಲಿಂದ ಮುಂಡ್ರೋಟಿಗೆ ಸಂಪರ್ಕ ಇದ್ಯಂತೆ. ಅಲ್ಲಿಂದ ಅರಬ್ಬೀಸಮುದ್ರದ ದಂಡೆ ತನಕವೂ ಈ ಗುಹೆಯಿಂದ ದಾರಿ ಇದ್ಯಂತೆ! ಇಂಥ ಕಥೆಗಳಿಗೇನೂ ಇಲ್ಲಿ ಕಡಿಮೆ ಇಲ್ಲ.
ನಮ್ಮ ಗೆಳೆಯರ ಬಳಗ, ಬ್ರಹ್ಮಗಿರಿ ಮತ್ತು ಸುತ್ತಮುತ್ತಲಿನ ಎಲ್ಲಾ ಬೆಟ್ಟಗುಡ್ಡಗಳನ್ನ ಹತ್ತಿ ಇಳ್ದಿದೆ. ಇಲ್ಲಿನ ಇಂಚು, ಇಂಚು ಜಾಗವೂ ನಮಗೆ ಪರಿಚಿತವೇ... ಆದ್ರೆ ಏಕೋ ಏನೋ ಬಾಪರೆ ಮೊಟ್ಟೆಯ ಆ ಗುಹೆ ಒಳಗೆ ಹೋಗ್ಬೇಕು ಅನ್ನೋ ಆಸೆ ಮಾತ್ರ ಈಡೇರ್ಲಿಲ್ಲ... ಗೆಳೆಯರೆಲ್ಲಾ ಈಗ ಉದ್ಯೋಗ ನೆಪದಲ್ಲಿ ಒಂದೊಂದು ಕಡೆ ಹರಡಿ ಹೋಗಿದ್ದೀವಿ. ಮತ್ತೆ ಈ ಬಾಪರೆ ಮೊಟ್ಟೆ `ಸಾಹಸ' ನೆಪದಲ್ಲಾದ್ರೂ ಒಂದಾಗ್ಬಹುದೇನೋ.... ಆ ದಿನಕ್ಕಾಗಿ ಕಾಯ್ತಿದ್ದೀನಿ.
1 comment:
WOW!!! Interesting....!
Post a Comment