Monday, 24 October 2011


ಚೇರಂಬಾಣೆ ಅರುಣ ಕಾಲೇಜು ಇದ್ಯಲ್ಲಾ, ತುಂಬಾ ಒಳ್ಳೇ ಪರಿಸರದಲ್ಲಿದೆ... ಒಂದು ಕಡೆ ಮಡಿಕೇರಿ-ಭಾಗಮಂಡಲ ರಸ್ತೆ, ಸುತ್ತಲೂ ಕಾಫಿತೋಟ.. ದೂರದಲ್ಲಿ ಕಾಣೋ ಬೆಟ್ಟಗುಡ್ಡಗಳು...ನಾನು ಅಲ್ಲಿ 2 ವರ್ಷ ಕಳ್ದಿದ್ದೇ ಗೊತ್ತಾಗಿರ್ಲಿಲ್ಲ. ನಾನು ಅಲ್ಲಿಯೇ ಪಿಯುಸಿ ಮಾಡಿದ್ದು. ಈ ಕಡೆ ಭಾಗಮಂಡಲದಿಂದ ಆ ಕಡೆ ತಾಳತ್ಮನೆ ತನಕ ಹೀಗೆ ಎಲ್ಲಾ ಕಡೆಗಳಿಂದ ಓದ್ಲಿಕ್ಕೆ ಬರ್ತಾರೆ. ಭಾಗಮಂಡಲದ ಕಾವೇರಿ ಹೈಸ್ಕೂಲ್ನಲ್ಲಿ ಎಸ್ಎಸ್ಎಲ್ಸಿ ಓದಿದವ್ರು, ಬೆಟಗೇರಿಯ ಉದಯ ಹೈಸ್ಕೂಲ್ನಲ್ಲಿ ಪಾಸ್ ಆದವ್ರು, ಇನ್ನು ಅದೇ ಅರುಣ ಪ್ರೌಢಶಾಲೇಲಿ ಓದಿದವ್ರು.. ಇಂಥ ತ್ರಿವೇಣಿ ಸಂಗಮವೇ ಚೇರಂಬಾಣೆ ಕಾಲೇಜಿನಲ್ಲಿ ಇರುತ್ತೆ. ಎಲ್ಲೆಲ್ಲಿಂದಲೋ ಬಂದವ್ರು ಕಾಲೇಜಿಗೆ ಸೇರಿ ತಿಂಗಳಲ್ಲೇ ಫ್ರೆಂಡ್ಸ್ ಆಗಿಬಿಡ್ತಾರೆ. ಈ ಥರ ರೆಡಿ ಆದ ಒಂದು ಟೀಂ `ನವಗ್ರಹ'. ಬೆಟಗೇರಿಯಿಂದ ಬರ್ತಿದ್ದ ಮಸೂದ್ ಈ ಟೀಂಗೆ ಲೀಡರ್. ಅವ್ನೂ ಸೇರ್ದ ಹಾಗೆ 9 ಮಂದಿ ಒಟ್ಟಿಗೆ ಇರ್ತಿದ್ದಿದ್ರಿಂದ ನಂ ರಾಮಕೃಷ್ಣ ಸರ್ ಆ ಟೀಂಗೆ `ನವಗ್ರಹ' ಅಂತ ಹೆಸರಿಟ್ಟಿದ್ದ್ರು...
ಆ `ನವಗ್ರಹ' ಟೀಂ ಮಾಡದ ಕಿತಾಪತಿಗಳೇ ಇರ್ಲಿಲ್ಲ... ಅದೆಲ್ಲಾ ಹುಡುಗಾಟದ ದಿನಗಳು.. ಏನು ಮಾಡಿದ್ರೂ, ಅದಕ್ಕೊಂದು ಸಿರಿಯಸ್ನೆಸ್ ಇರ್ತಿರ್ಲಿಲ್ಲ. `ನವಗ್ರಹ' ಟೀಂ ಕಿತಾಪತಿಗಳನ್ನು ಕೂಡ ನಮ್ಮ ಸರ್ಗಳು ಸೇರ್ದ ಹಾಗೆ ಯಾರೂ ಗಂಭೀರವಾಗಿ ತೆಗೆದುಕೊಂಡಿರ್ಲಿಲ್ಲ. ನಮ್ಗೂ ಅವ್ರ ಆಟೋಟೋಪಗಳನ್ನ ನೋಡೋದು ಒಂದು ಖುಷಿ. ನಮ್ ಕಾಲೇಜು ಪಕ್ಕದಲ್ಲೇ ಒಂದು ಕಾಫಿ ತೋಟ ಇತ್ತು. ಅದ್ರೊಳಗೆ ಪೈನಾಪಲ್, ಸಪೋಟ, ಹಲಸು ಬೆಳೀತ್ತಿದ್ರು. ಅಂದ್ರೆ, ವರ್ಷಪೂತರ್ಿ ಒಂದಲ್ಲಾ ಒಂದು ಹಣ್ಣು ಇದ್ದೇ ಇರ್ತಿತ್ತು. `ನವಗ್ರಹ' ಟೀಂ ಆ ತೋಟಕ್ಕೆ ಒಮ್ಮೆ ನುಗ್ಗಿತು ಅಂದ್ರೆ ಮುಗೀತು.. `ಕದಳಿವನದೊಳಗೆ ಕರಿ' ನುಗ್ಗಿದ ಹಾಗೆ ! ಅವ್ರು ತಂದಿದ್ದ್ರಲ್ಲಿ ನಮ್ಗೂ ಪಾಲು ಸಿಗ್ತಿತ್ತು ಅನ್ನಿ... ಗ್ರೌಂಡ್ನಲ್ಲಿ ಕೂತು ನಾವೆಲ್ಲಾ ಒಟ್ಟಿಗೆ ತಿಂತಿದ್ವಿ...ಮಸೂದ್ ಮೆಲ್ಲನೇ ಯಾರಿಗೂ ಗೊತ್ತಾಗದ ಹಾಗೆ ತಾನು ಲೈನ್ ಹೊಡೀತಿದ್ದ ಅನಿತಾಳಿಗೂ ತಲುಪಿಸಿಬಿಡ್ತಿದ್ದ.
ಈ `ನವಗ್ರಹ' ಟೀಂ ಮಾಡೋ ಕಳ್ಳ ಕೆಲ್ಸ ತೋಟದ ಓನರ್ಗೆ ಗೊತ್ತಾಗಿಬಿಟ್ಟಿತ್ತು. ನಂ ಪ್ರಿನ್ಸಿಪಾಲ್ಗೆ ಕಂಪ್ಲೇಂಟ್ ಮಾಡ್ದ. ಪ್ರಿನ್ಸಿಪಾಲ್ `ನವಗ್ರಹ' ಟೀಂನ ಎಲ್ಲಾ ಸದಸ್ಯರನ್ನ ಕರ್ದು, ಆ ಓನರ್ ಎದುರೇ `ಇನ್ನು ಹಾಗೆಲ್ಲಾ ಮಾಡ್ಬೇಡಿ ಆಯ್ತಾ' ಅಂತ ಹೇಳಿ ವಾಪಸ್ ಕಳ್ಸಿದ್ದ್ರು. `ಬಾಲ ನೆಟ್ಟಗಿದ್ದಿದ್ದು' ಒಂದು ವಾರ ಮಾತ್ರ... ಮತ್ತೆ, ಅದೇ ಹಳೇ ಚಾಳಿ ಮುಂದುವರೆಸಿತ್ತು `ನವಗ್ರಹ'.
ಕಾಲೇಜು ಎದುರಿಗೆ ರಸ್ತೆಯ ಮತ್ತೊಂದು ಕಡೆ ಚಿಕ್ಕ ಅಂಗಡಿ ಇತ್ತು. ಆ ಅಂಗಡೀಲಿ ಅಜ್ಜ ಅಥ್ವಾ ಅಜ್ಜಿ... ಇಬ್ರಲ್ಲಿ ಯಾರಾದ್ರು ಒಬ್ರು ಇರ್ತಿದ್ದ್ರು. ನಮ್ಮ `ನವಗ್ರಹ' ಟೀಂನಲ್ಲಿ ಒಂದು ಕೋಡ್ವಡರ್್ ಹರಿದಾಡ್ತಿತ್ತು. ಅದು `ಆಂಟಿ ಕ್ಯಾಪ್... ಅಂಕಲ್ ಕ್ಯಾಪ್' ! `ನವಗ್ರಹದ' ಒಂಬತ್ತು ಮಂದಿಗೆ ಬಿಟ್ರೆ ಬೇರೆ ಯಾರಿಗೂ ಆ ಕೋಡ್ವಡರ್್ನ ಸೀಕ್ರೆಟ್ ಗೊತ್ತಿರ್ಲಿಲ್ಲ. ನನಗೂ ಕುತೂಹಲ... ಮೊದ್ಲು ಆ ತಂಡದಲ್ಲಿ ಇದ್ದ ಚರಣ್ಗೆ ಕೇಳಿದ್ರೆ, ಅವ್ನೂ ಅಡ್ಡಡ್ಡ ತಲೆ ಆಡ್ಸಿದ್ದ.
ಕೊನೆಗೂ ಹೇಗೋ ಕೋಡ್ವಡರ್್ನ ಸೀಕ್ರೆಟ್ ಬಯಲಾಗಿತ್ತು. ತೋಟದಲ್ಲಿ ಹಣ್ಣ ಕದೀತ್ತಿದ್ದ ಈ ತುಂಟರು ಅಂಗಡೀಲೂ ತಮ್ಮ ಕೈಚಳಕ ತೋರಿಸ್ತಿದ್ದ್ರು. ಒಂದು ಪ್ಯಾಕೇಟ್ ಬಿಸ್ಕೆಟ್ಗೆ ದುಡ್ಡು ಕೊಟ್ಟು, ಮತ್ತೊಂದನ್ನ ಮೆಲ್ಲಗೆ ಎಗರಿಸೋದು.. 2 ಚಾಕಲೆಟ್ ಜೊತೆ ಮತ್ತೆ 5 ತೆಗೆದುಕೊಂಡು ಬಿಡೋದು.. ಈ ರೀತಿ ಮೋಸ ಅಂಗಡೀಲಿ ನಡೀತಿತ್ತು. ಅಜ್ಜ ಇದ್ದಾಗ ಹೀಗೆ ಮಾಡಿದ್ರೆ ಅದು `ಅಂಕಲ್ ಕ್ಯಾಪ್' ! ಅಜ್ಜಿ ಇದ್ದಾಗ ಕೈಚಳಕ ತೋರಿಸಿದ್ರೆ, ಅದು.. ಆಂಟಿ ಕ್ಯಾಪ್!
ಈಗ ಆ ನವಗ್ರಹಗಳು ಎಲ್ಲೆಲ್ಲಿ ಚದುರಿ ಹೋಗಿವೆಯೋ ಗೊತ್ತಿಲ್ಲ.... ಆದ್ರೆ ಆವತ್ತಿನ ನೆನಪುಗಳು ಮಾತ್ರ ಆಗಾಗ್ಗೆ ಬಂದು ಕಚಗುಳಿ ಇಡ್ತನೇ ಇರ್ತವೆ

No comments: