Thursday, 22 December 2011
ಮಡಿಕೇರಿಯ ಅಶ್ವಿನಿ ಆಸ್ಪತ್ರೇಲಿ ಕಂಡಿದ್ದು...
ಇದು ಮಡಿಕೇರಿಯ ಅಶ್ವಿನಿ ಆಸ್ಪತ್ರೇಲಿ ಕಂಡಿದ್ದು. ಗಾಜಿನ ಬಾಟಲಿಗಳನ್ನ ಕಪಾಟಿನಲ್ಲಿ ಜೋಡಿಸಿ ಇಟ್ಟ ಹಾಗಿದೆಯಲ್ಲಾ... ಆದ್ರೆ, ಗ್ಲೂಕೋಸ್ನ ಖಾಲಿ ಬಾಟಲಿಗಳನ್ನೇ ಇಟ್ಟಿಗೆ ಹಾಗೆ ಬಳಸಿ ಇಲ್ಲಿ ಗೋಡೆ ಕಟ್ಟಲಾಗಿದೆ. ಇವು ಈ ಹಿಂದೆ ಬರ್ತಿದ್ದ ಗಾಜಿನ ಬಾಟಲಿಗಳು. ಹೇಗಿದೆ ಮರುಬಳಕೆ ? ಮಾದರಿ ಅನ್ನೊದಿಕ್ಕೆ ಅಡ್ಡಿ ಇಲ್ಲ. ಈಗ ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಗ್ಲೂಕೋಸ್ ತುಂಬಿಸಿ ಮಾರಾತರ್ಾರೆ. ಖಾಲಿ ಆದ್ಮೇಲೆ ಅವು ಯಾವುದೇ ಉಪಯೋಗಕ್ಕೆ ಬರೋಲ್ಲ. ಸುಮ್ನೇ ಪರಿಸರ ಮಾಲಿನ್ಯ ಅಷ್ಟೇ...
Tuesday, 20 December 2011
ಕೊಡಗಿನಲ್ಲಿ ಸಕಲೇಶಪುರದ ಕಿತ್ತಳೆ !
ಕುಶಾಲನಗರದಿಂದ ಮಡಿಕೇರಿಗೆ ಹೋಗುವ ರಸ್ತೆ ಬದೀಲಿ ಅಲ್ಲಲ್ಲಿ ಕಿತ್ತಳೆ ಹಣ್ಣು ಮಾರ್ತಿರೋದನ್ನ ಕಾಣ್ಬಹುದು. ಕೊಡಗಿನ ಕಿತ್ತಳೆ ಅಂತ ಅದನ್ನ ಖರೀದಿಸಿದ್ರೆ, ನೀವು ಮೋಸ ಹೋದ್ರಿ ಅಂತನೇ ಅರ್ಥ. ಏಕಂದ್ರೆ ಅಲ್ಲಿ ಮಾರೋದು ಕೊಡಗಿನ ಕಿತ್ತಳೆ ಅಲ್ಲ. ಅದು ಸಕಲೇಶಪುರದಿಂದ ತಂದು, ಇಲ್ಲಿ ಮಾರೋ ಕಿತ್ತಳೆ ! ಕಿತ್ತಳೆ ಖರೀದಿಗೆ ಕೊಡಗಿನವರು ಬಂದಿದ್ದಾರೆ ಅಂತಾದ್ರೆ, ನಿಜ ಹೇಳ್ತಾರೆ. ಅದೇ ದೂರದಿಂದ ಬಂದ ಪ್ರವಾಸಿಗರಾದ್ರೆ ಮೂರು ನಾಮ ! ಅಲ್ಲಿ ಕೊಡಗಿನ ಕಿತ್ತಳೆ ಸಿಗೋದಿಲ್ಲ, ಬದಲಿಗೆ ಸ್ಥಳೀಯವಾಗಿ ಬೆಳೆದ ಸಿಹಿಸಿಹಿ ಮೂಸಂಬಿ ಸಿಗುತ್ತೆ.
ಒಂದು ಕಾಲ ಇತ್ತು, ಕೊಡಗು ಅಂದ್ರೆ, ಕಿತ್ತಳೆಯಿಂದ ಗುರುತಿಸುತ್ತಿದ್ದ ಸಮಯ ಅದು. ಪಂ. ಜವಾಹರ್ ಲಾಲ್ ನೆಹರು ಕೊಡಗಿಗೆ ಬಂದಿದ್ದಾಗ ಇಲ್ಲಿನ ಕಿತ್ತಳೆಯ ರುಚಿ ಮತ್ತೆ ಹುಡುಗಿಯರ ಸೌಂದರ್ಯದ ಬಗ್ಗೆ ಹೊಗಳಿ ಮಾತಾಡಿದ್ದ್ರು. 1960ರ ಸುಮಾರಿಗೆ ಕೊಡಗಿನಲ್ಲಿ ಅಂದಾಜು 24 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಿತ್ತಳೆ ಬೆಳೆಯಲಾಗ್ತಿತ್ತು. ಈಗ ಅದು 1400 ಹೆಕ್ಟೇರ್ಗೆ ಬಂದು ನಿಂತಿದೆ. ಆಗೆಲ್ಲಾ ಒಂದು ಗಿಡದಲ್ಲಿ 60 ಕೆಜಿಯಷ್ಟು ಕಿತ್ತಳೆ ಫಸಲು ಬತರ್ಿತ್ತು. ಆದ್ರೆ ಈಗ 10 ಕೆಜಿಯೂ ಸಿಗ್ತಿಲ್ಲ. ಕಾಫಿಗಿಡದ ಮಧ್ಯೆ ಇರ್ತಿದ್ದ ಕಿತ್ತಳೆ ಗಿಡಗಳು ತೋಟದ ಸೌಂದರ್ಯ ಹೆಚ್ಚಿಸೋಕೆ ಕೂಡ ಸಹಾಯ ಆಗ್ತಿದ್ದ್ವು.
ಕೊಡಗಿನ ಕಿತ್ತಳೆಯ ರುಚಿಯೇ ತುಂಬಾ ವಿಶಿಷ್ಟ. ರುಚಿಯಲ್ಲಿ ಈ ಕಿತ್ತಳೆ ಬಿಟ್ಟರೆ, ನಾಗ್ಪುರದ ಕಿತ್ತಳೆ ಎರಡನೇ ಸ್ಥಾನದಲ್ಲಿ ನಿಲ್ಲುತ್ತೆ. ಕೊಡಗಿನ ಕಿತ್ತಳೆಯ ಸಿಪ್ಪೆ ತೆಳು. ನೀರಿನಂಶ ಜಾಸ್ತಿ. ಬಾಯಿಯಲ್ಲಿ ನೀರೂರಿಸೋ ಹುಳಿಮಿಶ್ರಿತ ಸಹಿ, ಇದರ ರುಚಿ. ದಶಕಗಳ ಹಿಂದೆ ಬಂದ ಕಟ್ಟೆರೋಗ, ಕೊಡಗಿನಲ್ಲಿ ಕಿತ್ತಳೆ ಬೆಳೆ ನಶಿಸೋ ಹಾಗೆ ಮಾಡ್ತು.
ಇತ್ತೀಚೆಗೆ ಕೊಡಗಿನ ಕಿತ್ತಳೆಗೆ ವಿಶೇಷ ಭೌಗೋಳಿಕ ಬೆಳೆಯ ಮಾನ್ಯತೆ ಸಿಕ್ಕಿದೆ. ಇದರ ಸಹಾಯದಿಂದ ಕೊಡಗಿನಲ್ಲಿ ಕಿತ್ತಳೆ ಬೆಳೆ ಪುನಶ್ಚೇತನಕ್ಕೆ ಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕೃಷಿ ಮಿಷನ್ ನಲ್ವತ್ತೇಳೂವರೆ ಲಕ್ಷ ರೂಪಾಯಿಯ ಯೋಜನೆ ರೂಪಿಸಿದೆ. ಆದ್ರೆ ಇದರ ದುರುಪಯೋಗ ಆಗ್ತಿರೋದೇ ಹೆಚ್ಚು. ಕೊಡಗು ಜಿಲ್ಲಾಪಂಚಾಯತ್ ಹೋದ ವರ್ಷ ಕೊಡಗಿನ ಕಿತ್ತಳೆ ಹೆಸರಿನಲ್ಲಿ, ನಾಗಪುರದ ಕಿತ್ತಳೆ ಗಿಡಗಳನ್ನ ವಿತರಿಸಿದ್ದೇ ಇದಕ್ಕೆ ಉದಾಹರಣೆ.
ಮಡಿಕೇರಿಂದ ಕುಶಾಲನಗರಕ್ಕೆ ವಾಪಸ್ ಬರುವಾಗ ಸುಂಟಿಕೊಪ್ಪ ಹತ್ರ ಕಿತ್ತಳೆ ರಾಶಿ ನೋಡಿ, ಖರೀದಿಸೋಣ ಅಂತ ಅನ್ನಿಸ್ತು. ಗಾಡಿ ನಿಲ್ಲಿಸಿದ ಕೂಡ್ಲೇ ನಮ್ಮನ್ನ ನೋಡಿದ ಅಂಗಡಿಯವನು, `ಇದು ಸಕಲೇಶಪುರದ ಕಿತ್ತಳೆ ಸಾ..' ಅಂತ ಹೇಳಿ, ಅವನಾಗಿಯೇ ಮೂಸುಂಬಿ ತೆಗೆದುಕೊಟ್ಟ... ಸಿಹಿ ಸಿಹಿ ಮೂಸುಂಬಿ ತಿನ್ನವಾಗ `ನಂಜನಗೂಡಿನ ರಸಬಾಳೆ, ತಂದಿಹೆ ಕೊಡಗಿನ ಕಿತ್ತಳೆ' ಅನ್ನೋ ಪದ್ಯ ನೆನಪಾಯ್ತು. ಹಾಗಾಗಿ ಇದನ್ನೆಲ್ಲಾ ಬರೆಯಬೇಕಾಯ್ತು
Monday, 19 December 2011
`ಕಂದಕ'
ಈಚೆಗೆ ಓದೋ ಹವ್ಯಾಸ ಕಡಿಮೆ ಆಗ್ತಿದೆ ಅನ್ನೋ ಮಾತಿದೆ. ಆದ್ರೆ, ಪುಸ್ತಕ ಮಾರಾಟ ಕಡಿಮೆ ಆಗಿಲ್ವಲ್ಲಾ ಅಂತ ವಾದ ಮಾಡುವವರೂ ಇದ್ದಾರೆ. ಎರಡೂ ನಿಜ. ಉದಹಾರಣೆಗೆ ನಾನೇ ಇದ್ದೀನಲ್ಲಾ.... ತಿಂಗಳಿಗೊಮ್ಮೆಯಾದ್ರೂ ಕೋರಮಂಗಲ ಸಪ್ನ ಬುಕ್ ಹೌಸ್ಗೆ ಹೋಗಿ ಹೊಸ ಪುಸ್ತಕಗಳನ್ನ ಖರೀದಿಸಿ ತಕ್ಕೊಂಡು ಬರ್ತೀನಿ.. ಆದ್ರೆ ಯಾಕೋ ಓದೋಕೇ ಮನಸ್ಸಾಗೋಲ್ಲ. ಮುನ್ನುಡಿ, ಬೆನ್ನುಡಿ ನೋಡಿ, ಮತ್ತೆ ಓದಿದ್ರೆ ಆಯ್ತು ಅಂತ ಇಟ್ಟುಬಿಡ್ತೀನಿ... ಆ `ಮತ್ತೆ' ಬರೋದೇ ಇಲ್ಲ. ಅಂಥದ್ರಲ್ಲಿ ಈಚೆಗೆ ಒಂದು ಪುಸ್ತಕ ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಯ್ತು. ಹೆಸ್ರು `ಕಂದಕ'
`ಕಂದಕ' ಕಣಿವೆ ಭಾರದ್ವಾಜ್ ಬರೆದಿರೋ ಕಾದಂಬರಿ. ಬಹುಶ: ಅದ್ರ ವಸ್ತು ಓದಿಸಿಕೊಂಡು ಹೋಯ್ತಾ ಅಥವಾ ಅವ್ರ ಬರವಣಿಗೆ ಶೈಲಿಯ ಅಂತ ಗೊತ್ತಿಲ್ಲ. ಆಫೀಸ್ನಿಂದ ರಾತ್ರಿ ರೂಂಗೆ ಬಂದಾಗ ಮಲಗೋ ಮೊದ್ಲು ಸುಮ್ನೆ `ಕಂದಕ'ದ ಮುನ್ನುಡಿ, ಬೆನ್ನುಡಿ ಮೇಲೆ ಕಣ್ಣಾಡಿಸಿದೆ. ಓದೋಣಂತ ಕೂತ್ಕೊಂಡೆ. ಓದಿ ಮುಗಿದ್ಮೆಲೆನೇ ಮಲಗಿದ್ದು!
ಕೊಡಗು ಜಿಲ್ಲೆಯನ್ನ ಯಾವೆಲ್ಲಾ ಸಮಸ್ಯೆಗಳು ಕಾಡುತ್ತಿವೆಯೋ ಅವೆಲ್ಲಾ `ಕಂದಕ'ಕಲ್ಲಿ ಕಾಣಿಸಿಕೊಂಡಿವೆ. ಮುಖ್ಯವಾಗಿ ಮಲೆನಾಡಿನ ಒಂದು ಹಳ್ಳಿಯಲ್ಲಿ ಬೆಳೆದ ಒಬ್ಬ ವಿದ್ಯಾವಂತ ಉದ್ಯೋಗಕ್ಕಾಗಿ ನಗರಕ್ಕೆ ಬರೋದು, ಅಲ್ಲಿ ಹೊಂದಿಕೊಳ್ಳೋದಿಕ್ಕೆ ಅವನ ಪರದಾಟ, ಮತ್ತೆ ಹುಟ್ಟೂರಿನ ಸೆಳೆತ ಇವೆಲ್ಲಾ ತುಂಬಾ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಕಾದಂಬರಿಯ ನಾಯಕ ನಟೇಶ ಒಬ್ಬ ಪತ್ರಕರ್ತ. ರಾಜ್ಯಶಾಸ್ತ್ರದಲ್ಲಿ ಎಂಎ ಮಾಡಿ, ಪತ್ರಿಕಾರಂಗಕ್ಕೆ ಬಂದವ್ನು. ಅದಕ್ಕೆ ಇರಬೇಕು ನನಗೆ `ಕಂದಕ' ಹಿಡಿಸಿದ್ದು ! ಆದ್ರೆ ಕಾದಂಬರಿಯ ಅಂತ್ಯ ನನಗೇಕೋ ಇಷ್ಟ ಆಗಿಲ್ಲ. ಭಾರದ್ವಾಜ್ ಅವ್ರಿಗೆ ಇದ್ನ ಹೇಳ್ಬೇಕೂಂತ ಇದ್ದೀನಿ.
Friday, 16 December 2011
ಎಲ್ಲಿ ಹೋಯಿತು ಮಾನವೀಯತೆ ?
ನಿನ್ನೆ ರಾತ್ರಿ 12 ಗಂಟೆ. ಡ್ಯೂಟಿ ಮುಗ್ಸಿ ರೂಂಗೆ ಹೋಗೋಕೆ ಅಂತ ಕ್ಯಾಬ್ ಸ್ಟ್ಯಾಂಡ್ಗೆ ಹೋಗಿ ತಲುಪಿದ್ದೆ. ಅಷ್ಟೊತ್ತಿಗೆ ನೈಟ್ಶಿಫ್ಟ್ನ ಬಿಪಿ ನಾಡಿಗ್ ಹಿಂದೆನೇ ಓಡಿ ಬಂದು, ನಂ ಆಫೀಸ್ ಹತ್ರನೇ ಆ್ಯಕ್ಸಿಡೆಂಟ್ ಆದ ವಿಷ್ಯ ಹೇಳಿದ್ರು. ನೈಟ್ ಶಿಫ್ಟ್ ಕ್ಯಾಮೆರಾಮ್ಯಾನ್ ಅದಾಗ್ಲೇ ಎಂಜಿ ರೋಡ್ಲಿ ಆಗಿದ್ದ ಆ್ಯಕ್ಸಿಡೆಂಟ್ ಶೂಟ್ ಮಾಡೋಕೆ ರಿಪೋರ್ಟರ್ ಜೊತೆ ಹೋಗಿದ್ದ್ರು. ಇನ್ನೇನು ಮಾಡೋದು ಅಂತ ಯೋಚ್ನೆ ಮಾಡ್ತಿರ್ಬೇಕಾದ್ರೆ, ಸ್ಟುಡಿಯೋ ಕ್ಯಾಮೆರಾಮ್ಯಾನ್ ಓಡಿ ಹೋಗಿ ಕ್ಯಾಮೆರಾ ತಂದು ಶೂಟಿಂಗ್ಗೆ ರೆಡಿಯಾದ್ರು.
ಕೋರಮಂಗಲ ಬಿಗ್ಬಜಾರ್ನ ನಮ್ಮ ಆಫೀಸ್ ಹತ್ರನೇ ಆ್ಯಕ್ಸಿಡಂಟ್ ಆಗಿತ್ತು. ವಾಹನಗಳ ಪರಿಸ್ಥಿತಿ ನೋಡಿದ್ರೆ, ಕನಿಷ್ಠ ಇಬ್ರಾದ್ರೂ ತೀರ್ಕೊಂಡಿರ್ಬಹುದೇನೋ ಅನ್ನೋ ಥರ ಇತ್ತು. ಮಡಿವಾಳ ಕಡೆಯಿಂದ ಬರ್ತಿದ್ದ ಟಾಟಾ ಸಫಾರಿಯ ಕುಡುಕ ಡ್ರೈವರ್ ರೋಡ್ ಡಿವೈಡರ್ ದಾಟಿ ರಾಂಗ್ ಸೈಡಿನಲ್ಲಿ ನುಗ್ಗಿದ್ದ. ಆ ರಭಸಕ್ಕೆ ವ್ಯಾಗನ್ ಆರ್ನ ಮೂತಿ ಪುಡಿಪುಡಿ ಆಗಿತ್ತು. ಮತ್ತೊಂದು ಟಾಟಾ ಇಂಡಿಕಾಕ್ಕೂ ಹಾನಿ ಆಗಿತ್ತು. ಅಷ್ಟು ಕಿತಾಪತಿ ಮಾಡಿದ ಕುಡುಕ ಡ್ರೈವರ್ನ ಟಾಟಾ ಸಫಾರಿ ಎದುರಿಗೆ ಇದ್ದ ಫುಟ್ಪಾತ್ ಮೇಲೆ ಹೋಗಿನಿಂತುಬಿಟ್ಟಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿರ್ಲಿಲ್ಲ. ಆದ್ರೆ ನನಗೆ ಅಲ್ಲೊಂದು ಶಾಕ್ ಕಾದಿತ್ತು. ನಮ್ಮ ಜನ ಇಷ್ಟೊಂದು ಅಮಾನವೀಯವಾಗಿ ವತರ್ಿಸ್ತಾರ ? ಸಂವೇದನೆಯನ್ನ ಈ ಮಟ್ಟಿಗೆ ಕಳ್ಕೊಂಡಿದ್ದಾರಾ ಅಂತ ಯೋಚನೆ ಮಾಡೋ ಹಾಗಾಯಿತು.
ಈ ಆ್ಯಕ್ಸಿಡೆಂಟ್ ಆಗ್ತಿದ್ದ ಹಾಗೆ ಹೊಸೂರು ರೋಡ್ನಲ್ಲಿ ಟ್ರಾಫಿಕ್ ಜಾಂ ಆಯ್ತು. ಒಮ್ಮೆಲೇ ತುಂಬಾ ಜನ ಸೇರಿದ್ರು. ಪುಡಿಪಡಿಯಾದ ವಾಹನದೊಳಗೆ ಇರುವವರ ಸ್ಥಿತಿ ಏನೇನಾಗಿದೆ ಅನ್ನೋದನ್ನ ನೋಡೋ ಕಾಳಜಿ ಯಾರಿಗೂ ಇರಲಿಲ್ಲ. ಒಂದಿಷ್ಟು ಹುಡುಗರ ತಂಡ ಅಲ್ಲಿದ್ದ ಮೂರೂ ವಾಹನಗಳ ಡೋರ್ ಓಪನ್ ಮಾಡ್ತು. ಕೈಗೆ ಸಿಕ್ಕಿದ ಲ್ಯಾಪ್ಟಾಪ್, ಐ ಫೋನ್, ವ್ಯಾನಿಟಿ ಬ್ಯಾಗ್, ಪಸರ್್ ಕೊನೆಗೆ ನೀರಿನ ಬಾಟಲ್ ಎಲ್ಲವನ್ನೂ ದೋಚಿದ್ರು. ಗಾಯಗೊಂಡು ನರಳ್ತಿದ್ದವ್ರು ತಮ್ಮ ವಸ್ತುಗಳು ಇನ್ನೊಬ್ಬರ ಪಾಲಾಗ್ತಿರೋದನ್ನ ನೋಡಿ ಬೊಬ್ಬೆ ಹೊಡೀತಿದ್ದ್ರೂ, ಯಾವುದೇ ಪ್ರಯೋಜನ ಆಗಿಲ್ಲ. ಅಲ್ಲಿದ್ದ ಪೊಲೀಸ್ರು ಇದಕ್ಕೆಲ್ಲಾ ಮೂಕಸಾಕ್ಷಿಗಳಾಗಿದ್ದ್ರು. ನಮ್ಮ ಕೆಮೆರಾಮ್ಯಾನ್ ಆ್ಯಕ್ಸಿಡೆಂಟ್ ದೃಶ್ಯಗಳನ್ನ ಶೂಟ್ ಮಾಡ್ತಿದ್ದ್ರೆ, ಇದೇ ತಂಡ ಅಡ್ಡಿಪಡಿಸ್ತು. ಬಹುಶ: ಕೆಮೆರಾ ಲೈಟ್ ಬೆಳಕಿನಲ್ಲಿ ತಮ್ಮ ಕೈಚಳಕ ಎಲ್ಲಿ ಬಯಲಾಗುತ್ತೆ ಅನ್ನೊ ಭಯ ಇರ್ಬೇಕು. ಇಷ್ಟೇ ಅಲ್ಲ, ವ್ಯಾಗನ್ ಆರ್ನಲ್ಲಿ ಇದ್ದ ಗಾಯವಾಗಿದ್ದ ಮಹಿಳೆಯನ್ನ ಆ್ಯಂಬುಲೆನ್ಸ್ಗೆ ಸಾಗಿಸುವಾಗಂತೂ ಈ ತಂಡದ ಒಬ್ಬಾತ ನಡೆದುಕೊಂಡಿದ್ದು, ನಾಗರಿಕರು ಅನ್ನಿಸಿಕೊಂಡವರು ತಲೆತಗ್ಗಿಸುವ ಹಾಗಿತ್ತು. ಆಕೆ `ಡೋಂಟ್ ಟಚ್ ಮಿ' ಅಂತ ಕೂಗ್ತಿದ್ದ್ರೆ, ಈತ ಆಕೆಯ ಮುಟ್ಟಬಾರದ ಜಾಗಗಳನ್ನ ಮುಟ್ಟಿ ಸಂಗಡಿಗರತ್ತ ನೋಡಿ ಹಲ್ಲುಗಿಂಜುತ್ತಿದ್ದ.
ಸುದ್ದಿಮನೆಯಲ್ಲಿ ಕೂರುವ ನನಗೆ ಇಂಥದ್ದೆಲ್ಲಾ ಕೇಳಿ, ಓದಿ ಗೊತ್ತಿತ್ತಷ್ಟೆ... ಕೆಲವೊಂದು ಎಲ್ಲೋ ಅತಿರಂಜನೀಯ ಇರ್ಬಹುದೇನೋ ಅಂತ ಸುಮ್ನೆ ಆಗಿಬಿಡ್ತಿದ್ದೆ. ಆದ್ರೆ ನನ್ನ ಕಣ್ಣಮುಂದೆಯೇ ನಡೆದಾಗ ಮಾತ್ರ, ನಾವು ಇಷ್ಟು ಕೆಟ್ಟುಹೋಗಿದೆಯೇ ಅನ್ನಿಸೋಕೆ ಶುರುವಾಗಿದೆ. ಛೇ... ಎಂಥ ನಾಚಿಕೆಗೇಡು !
Sunday, 11 December 2011
ಪ್ರಾನ್ಸ್ ನ `ಪರಶುರಾಮ'
ಇಲ್ಲಿ ಮಕ್ಕಳ ಮಧ್ಯೆ ಕೂತಿದ್ದಾರಲ್ಲ, ಇವ್ರು ಫ್ರಾನ್ಸ್ನ ಜೋಡಿ. ಭಾರತದ ಬಗ್ಗೆ ಹುಚ್ಚು ಅಭಿಮಾನ ಇಟ್ಟುಕೊಂಡಿರುವವರು. ಇಡೀ ಭಾರತವನ್ನ ಇಂಚಿಂಚೂ ತಿಳ್ಕೊಳ್ಬೇಕು ಅನ್ನೋದು ಇವ್ರ ಆಸೆ. ಅದಕ್ಕಾಗಿ ತಾಯಿ ನೆಲವನ್ನ ಬಿಟ್ಟು ಬಂದಿದ್ದಾರೆ. ನಮ್ಮ ದೇಶವನ್ನ ಅವ್ರು ಕಾಲುನಡಿಗೆಯಲ್ಲೇ ಸುತ್ತುತ್ತಿದ್ದಾರೆ. ಹಾಗೆ ಸದ್ಯ ಕುಶಾಲನಗರದಲ್ಲಿ ಈ ಜೋಡಿಯ ವಾಸ್ತವ್ಯ. ಇಲ್ಲಿಗೆ ಬರೋಕೆ ಮೊದ್ಲು ಗೋವಾದಲ್ಲಿ ಇದ್ದ್ರು. ಅಲ್ಲಿಂದ ಉಡುಪಿ ಮಂಗಳೂರು ಮಾರ್ಗವಾಗಿ ಮಡಿಕೇರಿಗೆ ಬಂದು ಈಗ ಕುಶಾಲನಗರ ತಲುಪಿಕೊಂಡಿದ್ದಾರೆ. ಈ ಜೋಡಿಗೆ ಯಾಕೋ ಗೋವಾ ಇಷ್ಟ ಆಗ್ಲಿಲ್ವಂತೆ. ಬಹುಶ: ಅದೇ ಬಿಳಿತೊಗಲಿನವರು ಬಟ್ಟೆಬಿಚ್ಚಿಕೊಂಡು ಗೋವಾದ ಸಮುದ್ರದಂಡೆಯ ಮರಳಿನ ಮೇಲೆ ಬಿದ್ದು ಹೊರಳಾಡೋದನ್ನ ನೋಡಿ, ಇವ್ರಿಗೆ ತಮ್ಮ ದೇಶದ ನೆನಪಾಗಿರಬೇಕೇನೋ... ಗೋವಾ ಒಂದು ಜಾಗ ಬಿಟ್ಟ್ರೆ ಇವ್ರ ಬಾಯಲ್ಲಿ ಬರೋದು `ವಿ ಲವ್ ಇಂಡಿಯಾ' ಅಂತನೇ...
ಅಂದ ಹಾಗೆ ಈ ಗಂಡಸಿನ ಹೆಸ್ರು. ಜಾನ್... ಈಕೆ ಅವ್ನ ಹೆಂಡತಿ, ಅದೆಂಥದ್ದೋ ಕ್ರಿಶ್ಚಿಯನ್ ಹೆಸ್ರು, ನೆನಪಿಗೆ ಬರ್ತಿಲ್ಲ. ಹೌದು, ಇದು ಕ್ರಿಶ್ಚಿಯನ್ ಜೋಡಿ. ಇವ್ರ ಸ್ವಂತ ನೆಲ ಫ್ರಾನ್ಸ್ನಲ್ಲಿ ಒಂದು ರಾತ್ರಿ ಚಚರ್್ನಲ್ಲಿ ಉಳ್ಕೊಳ್ತೀವಿ ಅಂದ್ರೆ, ಅಲ್ಲಿಂದ ಓಡಿಸಿ ಬಿಡ್ತಿದ್ದ್ರಂತೆ. ಆದ್ರೆ ಭಾರತದಲ್ಲಿ ಹಾಗಿಲ್ಲ ಅನ್ನೋದೇ ಇವ್ರ ಖುಷಿಗಳಲ್ಲಿ ಒಂದು. ದೇವಸ್ಥಾನ, ಮಂದಿರ, ಮಸೀದಿ ಕೊನೆಗೆ ಬೀದಿ ಬದಿಯ ಯಾರದ್ದೋ ಮನೆ... ಹೀಗೆ ಎಲ್ಲಿಯಾದ್ರೂ ಸರಿ ಒಂದು ರಾತ್ರಿ ಉಳ್ಕೊಳ್ಳೋದಿಕ್ಕೆ ಯಾವುದೇ ತೊಂದರೆ ಆಗಿಲ್ಲವಂತೆ. ಹೀಗೆ ಪಾದಯಾತ್ರೆ ಮಾಡ್ತಿರ್ಬೇಕಾದ್ರೆ, ರಾಜಸ್ತಾನದ ಜೈಪುರ ಹತ್ರ ಮರಳುಗಾಡಿನ ಹಳ್ಳಿ ಒಂದ್ರಲ್ಲಿ ಇವ್ರಿಗೆ ರಾತ್ರಿ ಕಳೀಬೇಕಾಗಿ ಬಂತು. ಎಲ್ಲೋ ಒಂದು ಪುಟ್ಟ ಗುಡಿಸಲು ಕಂಡಾಗ ಅಲ್ಲಿಯೇ ಇವ್ರು ಆಶ್ರಯ ಕೇಳಿದ್ದಾರೆ. ಜಠರವನ್ನೇ ಕರಗಿಸುವಂತ ಹಸಿವು ಬೇರೆ. ಆ ಗುಡಿಸಲು ನೋಡಿದರೆ ಸಾಕು, ಅದರ ಮನೆ ಯಜಮಾನ ಎಂಥ ಬಡತನದಲ್ಲಿ ಇದ್ದಾನೆ ಅನ್ನೋದು ಕಣ್ಣುಮುಂದೆ ಬರ್ತಿತ್ತು. ಅಂತ ಪರಿಸ್ಥಿತಿಲೂ `ಅತಿಥಿ ದೇವೋಭವ' ಅಂತ ಈ ಫ್ರಾನ್ಸ್ ಜೋಡಿಯನ್ನ ಉಪಚರಿಸಿದ್ದಾನೆ. ಈ ವಿಷಯ ಹೇಳ್ಬೇಕಾದ್ರೆ ಜಾನ್ ದಂಪತಿ ಕಣ್ಣಲ್ಲಿ ನೀರು ತೊಟ್ಟಿಕ್ಕುತ್ತೆ.
ಜಾನ್ ಹತ್ರ ಇರೋ ಸಂಪತ್ತು ಒಂದು ವೀಡಿಯೋ ಕೆಮೆರಾ ಮತ್ತೆ ಎರಡು ಕೊಳಲುಗಳು. ಜಾನ್ ತುಂಬಾ ಚೆನ್ನಾಗಿ ಕೊಳಲು ಊದ್ತಾನೆ. ಇದನ್ನೂ ಅವ್ನು ಕಲಿತಿದ್ದು ಭಾರತದಲ್ಲಿ. ಮೊನ್ನೆ ಕಣಿವೆಯ ಭಾರದ್ವಾಜ್ ಅವ್ರ `ಕಂದಕ' ಬಿಡುಗಡೆ ಸಮಾರಂಭದಲ್ಲಿ ಪ್ರಾರ್ಥನೆ ಇರ್ಲಿಲ್ಲ. ಬದ್ಲಿಗೆ ಜಾನ್ನ ಕೊಳಲುವಾದನ ಕಾರ್ಯಕ್ರಮ ಇತ್ತು. ಆತನ ತನ್ಮಯತೆಯ ಕೊಳಲು ನುಡಿಸುವಿಕೆ ನಿಜಕ್ಕೂ ಅದ್ಭುತ.
ಇಂಥ ಜಾನ್ ಮತ್ತೆ ಅವ್ನ ಶ್ರೀಮತಿ ಈಗ ಕುಶಾಲನಗರದಿಂದ ಕ್ಯಾಲಿಕಟ್ ಕಡೆ ಹೊರಟಿದ್ದಾರೆ. ಯಥಾ ಪ್ರಕಾರ ಅದೇ ಕಾಲ್ನಡಿಗೆ... ಬಹುಶ: ಪರಶುರಾಮನ ಪಾದದ ಶಕ್ತಿ ಇವ್ರಿಬ್ರಿಗೆ ಸಿಕ್ಕಿರ್ಬೇಕೇನೋ... `ಆಲ್ ದಿ ಬೆಸ್ಟ್' ಅನ್ನೋದಷ್ಟೇ ನಮ್ಮ ಕಾಯಕ.
Monday, 28 November 2011
ಅಪರೂಪದ ಮೋಹನ್ಕುಮಾರ್
ದೊಡ್ಡ ದೊಡ್ಡ ಉದ್ಯಮಿಗಳು ತಮ್ಮ ಸಂಪಾದನೆಯ ಒಂದು ಭಾಗವನ್ನು ಸಮಾಜಸೇವೆಗೆ ಅಂತ ತೆಗೆದಿಡೋದು ಉಂಟು. ಅಲ್ಲಲ್ಲಿ ಕೆಲವು ಸಣ್ಣಪುಟ್ಟ ವ್ಯಾಪಾರಿಗಳೂ ಇಂಥ ಕೆಲಸ ಮಾಡೋದನ್ನು ಕೇಳಿದ್ದೇವೆ. ಕೊಡಗಿನ ಕುಶಾಲನಗರದಲ್ಲಿರೋ ಮನುಪ್ರೆಸ್ ಮಾಲಿಕ ಮೋಹನ್ ಕುಮಾರ್ ಈ ಥರದ ಅಪರೂಪದ ವ್ಯಕ್ತಿ. ಹೋದ ವಾರ ಕುಶಾಲನಗರಕ್ಕೆ ಹೋದಾಗ ಮೋಹನ್ ಕುಮಾರ್ ಅವರ ಸಾಮಾಜಿಕ ಕಳಕಳಿಯನ್ನ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತು. ಅದು `ಕಲಾಮೇಳ'
ಪ್ರತಿವರ್ಷ ನವೆಂಬರ್ ತಿಂಗಳ ಒಂದು ಶನಿವಾರ ಈ `ಕಲಾಮೇಳ' ನಡೆಯುತ್ತೆ. ಅದು ಪ್ರೌಢ ಶಾಲಾ ಮಕ್ಕಳಿಗೋಸ್ಕರ ನಡೆಯುವ ಜಿಲ್ಲಾಮಟ್ಟದ ಸ್ಪಧರ್ೆ. ಅಲ್ಲಿ ರಂಗೋಲಿ, ಪ್ರಬಂಧ, ಚಿತ್ರಕಲೆ, ಸಮೂಹನೃತ್ಯ ಮತ್ತು ಭರತನಾಟ್ಯ ಸ್ಪಧರ್ೆ ಇರುತ್ತೆ. ಅದರಲ್ಲೂ ಪ್ರಬಂಧ ಸ್ಪಧರ್ೆಗೆ ಸ್ಥಳದಲ್ಲೇ ವಿಷಯ ಕೊಡಲಾಗುತ್ತೆ. ಪ್ರಬಂಧಕ್ಕೆ ವಿಷಯ ನಿರ್ಧರಿಸುವವರೂ ಸ್ವತ: ಮೋಹನ್ಕುಮಾರ್ ಅವರೇ. ಈ ವರ್ಷ ನಡೆದಿದ್ದು 13ನೇ ವರ್ಷದ ಕಲಾಮೇಳ ! ಮಕ್ಕಳೇ ಇಲ್ಲಿ ಉದ್ಘಾಟಕರು. ಯಾವುದೇ ಭಾಷಣದ ಅಬ್ಬರ ಇರೋಲ್ಲ. ಒಂದಿಡೀ ದಿನ ಮಕ್ಕಳದ್ದೇ ಸಾಮ್ರಾಜ್ಯ ! ಆರಂಭದಿಂದ ಇಲ್ಲಿವರೆಗೂ ಸ್ಪಧರ್ೆಯ ವಿಭಾಗಗಳು ಬದಲಾಗಿಲ್ಲ. ಆದ್ರೆ ಭಾಗವಹಿಸುವವರ ಸಂಖ್ಯೆ ಮಾತ್ರ ವರ್ಷದಿಂದ ವರ್ಷಕ್ಕೆ ಜಾಸ್ತಿ ಆಗುತ್ತನೇ ಇದೆ. ಎಲ್ಲರಿಗೂ ಮಧ್ಯಾಹ್ನ ರುಚಿಕಟ್ಟಾದ ಊಟದ ವ್ಯವಸ್ಥೆ ಇರುತ್ತೆ. ಭಾಗವಹಿಸಿದವರಿಗೆಲ್ಲಾ ಪ್ರಥಮ, ದ್ವಿತೀಯ ಸೇರಿ ಒಂದಲ್ಲಾ ಒಂದು ರೀತಿಯ ಬಹುಮಾನವೂ ಕೊಡ್ತಾರೆ. ಎಲ್ಲಾ ಸೇರಿದರೆ ಹತ್ತಿರ ಹತ್ತಿರ ಒಂದೂವರೆ ಲಕ್ಷ ರೂಪಾಯಿ ಖಚರ್ಾಗುತ್ತೆ. ಇದು ಮೋಹನ್ಕುಮಾರ್ ತಮ್ಮ ಸ್ವಂತ ಜೇಬಿನಿಂದ ತೆಗೆದು ಕೊಡೋ ಹಣ !
`ಆಹಾರ ಅಪವ್ಯಯ ತಡೆಗಟ್ಟಿ ಅಭಿಯಾನ' ಇದು ಮೋಹನ್ಕುಮಾರ್ ಅವರ ಮತ್ತೊಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮ. ಊಟದ ತಟ್ಟೆಯಲ್ಲಿ ಒಂದಗಳು ಬಿಟ್ಟು ಎದ್ದರೂ ಮೋಹನ್ಕುಮಾರ್ ಅವರಿಗೆ ಸಹಿಸೋಕ್ಕೆ ಆಗೋಲ್ಲ. ಇದನ್ನೇ ಅವ್ರು ಒಂದು ಅಭಿಯಾನವನ್ನಾಗಿ ಶುರು ಮಾಡಿದಾರೆ. ಆಹಾರ ಬೆಳೆಯೋದಿಕ್ಕೆ ರೈತರು ಪಡೋ ಕಷ್ಟ ಮತ್ತು ಒಂದು ಹೊತ್ತಿನ ಊಟಕ್ಕೂ ಕೆಲವರು ಪರದಾಡೋ ಪರಿಯನ್ನ ಮೋಹನ್ಕುಮಾರ್ ಮನಮುಟ್ಟೋ ಹಾಗೆ ವಿವರಿಸೋ ಕರಪತ್ರ ಪ್ರಿಂಟ್ ಮಾಡ್ಸಿದಾರೆ. ಅದನ್ನ ಶಾಲಾಕಾಲೇಜುಗಳ ಮಕ್ಕಳಿಗೆ ಹಂಚ್ತಾರೆ. ಕಲ್ಯಾಣಮಂಟಪಗಳಿಗೆ ಹೋಗಿ ಬ್ಯಾನರ್ ಕಟ್ತಾರೆ. ಏನಾದ್ರು ಕಾರ್ಯಕ್ರಮಗಳು ನಡೀತ್ತಿದ್ದ್ರೆ ಅಲ್ಲಿಗೂ ಹೋಗಿ ಜಾಗೃತಿ ಮೂಡಿಸೋ ಕೆಲಸ ಮಾಡ್ತಾರೆ. ಇಲ್ಲೂ ವರ್ಷಕ್ಕೆ ಲಕ್ಷಕ್ಕೂ ಹೆಚ್ಚು ರೂಪಾಯಿ ಕೈಬಿಟ್ಟು ಹೋಗುತ್ತೆ. ಅದೂ ಅವರ ಸ್ವಂತ ದುಡ್ಡು.
ಮೋಹನ್ ಕುಮಾರ್ ಅವ್ರ ಇಂಥ ಕೆಲಸ ಹೊರ ಜಗತ್ತಿಗೆ ಗೊತ್ತೇ ಆಗೋಲ್ಲ. ಏಕಂದ್ರೆ ಅವ್ರು ಎಲ್ಲರ ಹಾಗೆ ಪ್ರಚಾರ ಬಯಸೋ ವ್ಯಕ್ತಿ ಅಲ್ಲ. ಇಂಥವರ ಸಂತತಿ ಸಾವಿರ ಆಗಲಿ...
Saturday, 19 November 2011
Thursday, 3 November 2011
ಜಾವಾ ಬೈಕ್
ಕೊಡಗು, ಅದ್ರಲ್ಲೂ ಭಾಗಮಂಡಲದಂಥ ಪ್ರದೇಶದಲ್ಲಿ ಮಳೆ ಒಂಥರ ಬೆನ್ನು ಬಿಡದ ಬೇತಾಳ ಇದ್ದ ಹಾಗೆ. ಭಾಗಮಂಡಲದಲ್ಲಂತೂ ಒಮ್ಮೆ ಮಳೆ ಶುರು ಆಯ್ತು ಆಂದ್ರೆ, ಎಷ್ಟು ಹೊತ್ತಿಗೆ ನಿಲ್ಲುತ್ತಪ್ಪ ಅನ್ನೋ ಹಾಗೆ ಇರುತ್ತೆ. ಬರೀ ಮಳೆ ಆದ್ರೆ ಪರ್ವಾಗಿಲ್ಲ. ಅದ್ರ ಜೊತೆ ಜೋರು ಗಾಳಿ, ಮೂಳೆಯನ್ನೇ ಕೊರೆಯೋ ಚಳಿ. ಈಗ್ಲೇ ಈ ತರ ಆದ್ರೆ ಇನ್ನೊಂದು 30-40 ವರ್ಷಗಳ ಹಿಂದೆ, ಕಾಡುಗಳು ದಟ್ಟವಾಗಿದ್ದ ಸಮಯದಲ್ಲಿನ ಪರಿಸ್ಥಿತಿ ಹೇಗೆ ಇದ್ದಿರ್ಬಹುದು, ಯೋಚನೆ ಮಾಡಿ.... ಇಂಥ ವಾತಾವರಣದಲ್ಲೂ ಆಗಿನ ಬೈಕ್ಗಳು ಒಂದೇ ಕಿಕ್ನಲ್ಲಿ ಸ್ಟಾಟರ್್ ಆಗ್ತಿದ್ವು. ಅದು ಈಗಿನ ಜಮಾನದ ಸ್ಟೈಲಿಷ್ ಬೈಕ್ಗಳಲ್ಲ...`ಜಾವಾ' ಬೈಕ್
ನಾನು ನಡಿಲಿಕ್ಕೆ ಕಲಿತಾಗ್ಲೇ ನಮ್ಮ ಅಪ್ಪ 3 ಚಕ್ರದ ಸೈಕಲ್ ಕೊಡ್ಸಿದ್ದ್ರು. (ಈಗ ಅದ್ರ ಚಕ್ರಗಳು ಮಾತ್ರ ಇವೆ... ಬಾಲ್ಯದ ನೆನಪಿಗೆ) ಆದ್ರೆ ನನಗೆ ಸೈಕಲ್ ಮೇಲೆ ಆಸಕ್ತಿನೇ ಇರ್ಲಿಲ್ಲ. ನನ್ನ ಕಣ್ಣು ಏನಿದ್ರೂ ಬೈಕ್ ಮೇಲೆನೆ. ನನ್ನ ಭಾಗಮಂಡಲದಲ್ಲಿ ಆಗ ಇದ್ದಿದ್ದೇ ನಾಲ್ಕು ಬೈಕ್ಗಳು. ಅವೂ ಜಾವಾ ಬೈಕ್ಗಳು. ತಲಕಾವೇರಿಯ ನಾರಾಯಣ ಆಚಾರ್, ನನ್ನ ದೋಸ್ತ್ ಪ್ರವೀಣನ ಅಪ್ಪ ವಿಠಲಾಚಾರ್, ಕುದುಪಜೆ ಪಳಂಗಪ್ಪ ಮತ್ತೆ ನಮ್ಮ ಹೆಡ್ಮಿಸ್ ಆಗಿದ್ದ ಗೀತಾಬಾಯಿ ಮೇಡಂ ಪತಿ ಸೋಮಶೇಖರ್ ನಾಯಕ್ ಬೈಕ್ ಇಟ್ಕೊಂಡಿದ್ದವ್ರು. ಜೋರು ಶಬ್ದದಿಂದಾಗಿ, ಜಾವಾ ಬೈಕ್ ಬರೋದು ತುಂಬಾ ದೂರದಿಂದ್ಲೇ ಗೊತ್ತಾಗಿಬಿಡ್ತಿತ್ತು. ನಾನು ರಸ್ತೆ ಬದಿಗೆ ಬಂದು ಆ ಬೈಕ್, ಅದರ ಸವಾರನ ಗತ್ತು ಕಣ್ತುಂಬಿಸಿಕೊಳ್ತಿದ್ದೆ. ಪ್ರವೀಣ್ ಅವ್ನ ಅಪ್ಪನ ಬೆನ್ನಿಗೆ ಅಂಟಿ ಕೂತು ಬೈಕ್ನಲ್ಲಿ ಹೋಗ್ತಿದ್ದರಂತೂ, ನನಗೂ ಬೈಕ್ ಸವಾರಿಯ ಆಸೆ ಬಂದು ಬಿಡ್ತಿತ್ತು. ಆಗೆಲ್ಲಾ ಮನೆಲಿದ್ದ ಕುಚರ್ಿ ಮೇಲೆ ಉಲ್ಟಾ ಕೂತು, ಬಾಯಿಯಲ್ಲಿ ಬೈಕ್ ತರ ಶಬ್ದ ಮಾಡ್ಕೊಂಡು, ಓಡಿಸಿದ ಹಾಗೆ ನಾಟಕ ಮಾಡಿ ತೃಪ್ತಿಪಟ್ಟುಕೊಳ್ತಿದ್ದೆ. ಇಲ್ಲಾಂದ್ರೆ ನನ್ನ ಮೂರು ಚಕ್ರದ ಸೈಕಲೇ ಬೈಕ್ ಆಗಿಬಿಡ್ತಿತ್ತು. ಹೋದ ತಿಂಗಳು ನನ್ನ ಟಿವಿಎಸ್ ವಿಕ್ಟರ್ ಬೈಕ್ನಲ್ಲಿ ಭಾಗಮಂಡಲಕ್ಕೆ ಹೋಗಿದ್ದೆ. ಅಲ್ಲಿ ನಮ್ಮ ಅಂಕಲ್ ಅಂಗಡೀಲಿ ಕೂತಿರ್ಬೇಕಾದ್ರೆ ಇದೆಲ್ಲಾ ನೆನಪಿಗೆ ಬಂತು.
ಈಗ ದುಡ್ಡು ತೆಗೆದುಕೊಂಡು ಶೋರೂಂಗೆ ಹೋದ ಕೂಡ್ಲೇ ಹೊಸ ಬೈಕ್ ತರ್ತೀವಲ್ಲಾ... ಆದ್ರೆ ಜಾವಾ ಬೈಕ್ ಹಾಗಲ್ಲ, ಬುಕ್ ಮಾಡಿ ವರ್ಷಗಟ್ಟಲೆ ಕಾಯಬೇಕಿತ್ತು. ಬೈಕ್ ಫ್ಯಾಕ್ಟರಿ ಇದ್ದಿದ್ದು, ನಮ್ಮ ಮೈಸೂರಿನಲ್ಲೇ... 1961ರಲ್ಲಿ ಶುರುವಾಗಿದ್ದು. ವರ್ಷಕ್ಕೆ 42 ಸಾವಿರ ಬೈಕ್ಗಳನ್ನ ತಯಾರಿಸೋ ಸಾಮಥ್ರ್ಯ ಈ ಫ್ಯಾಕ್ಟರಿಗೆ ಇತ್ತು. 36 ಸಾವಿರ ಬೈಕ್ಗಳನ್ನ ರೆಡಿ ಮಾಡ್ತಿದ್ದ್ರು. ಭಾರತದ ಎಲ್ಲಾ ಕಡೆಗೆ ಇಲ್ಲಿಂದಲೇ ಸಪ್ಲೈ ಆಗ್ತಿತ್ತು. ಜೆಕೋಸ್ಲೋವಾಕಿಯಾ ದೇಶ ಭಾರತಕ್ಕೆ ಬೈಕ್ ತಯಾರಿಸೋದು ಹೇಗೆ ಅನ್ನೋದನ್ನ 1968ರ ತನಕ ಹೇಳಿಕೊಡ್ತು. ನಂತರ ನಮ್ಮವರೇ ಬೈಕ್ ತಂತ್ರಜ್ಞಾನ ಕಲಿತುಕೊಂಡ್ರು. ಜಾವಾ ಅನ್ನೋ ಹೆಸರಲ್ಲಿ ರೆಡಿಯಾಗ್ತಿದ್ದ ಬೈಕ್ ಆಮೇಲೆ `ಯಜ್ಡಿ' ಆಯ್ತು. ಆದ್ರೂ ಆ ಬೈಕನ್ನ ಎಲ್ಲರೂ ಕರೀತ್ತಿದ್ದಿದ್ದು, `ಜಾವಾ' ಬೈಕ್ ಅಂತನೇ... 6 ತರದ ಬೈಕ್ಗಳನ್ನ ಯಜ್ಡಿ ಕಂಪೆನಿ ತಯಾರು ಮಾಡ್ತಿತ್ತು. ಲೂನಾ ಕಾನ್ಸೆಪ್ಟ್ ಕೊಟ್ಟಿದ್ದೇ `ಯಜ್ಡಿ ಕೋಲ್ಟ್' ಅನ್ನೋ ಬೈಕ್.
ಯಜ್ಡಿ ಬೈಕ್ಗಳು ಆವತ್ತು ವರ್ಷಕ್ಕೆ ಎಷ್ಟು ಸಂಖ್ಯೇಲಿ ರಸ್ತೆಗೆ ಬರ್ತಿತ್ತೊ, ಇವತ್ತು ಅಷ್ಟೇ ಸಂಖ್ಯೇಲಿ ಬೇರೆ ಬೇರೆ ಕಂಪೆನಿಗಳ ಬೈಕ್ಗಳು ಪ್ರತಿ ದಿನ ಮಾರಾಟ ಆಗ್ತಿವೆ. ಆದ್ರೆ, ಆ ಯಜ್ಡಿ ಬೈಕ್ನ ಮಜಾ ಮತ್ತೆ ಸವಾರಿಯ ಗತ್ತು ಮಾತ್ರ ಈಗಿನ ಈ ಬೈಕ್ಗಳಲ್ಲಿ ಸಿಗೋದು ಕಷ್ಟ
Monday, 24 October 2011
ಚೇರಂಬಾಣೆ ಅರುಣ ಕಾಲೇಜು ಇದ್ಯಲ್ಲಾ, ತುಂಬಾ ಒಳ್ಳೇ ಪರಿಸರದಲ್ಲಿದೆ... ಒಂದು ಕಡೆ ಮಡಿಕೇರಿ-ಭಾಗಮಂಡಲ ರಸ್ತೆ, ಸುತ್ತಲೂ ಕಾಫಿತೋಟ.. ದೂರದಲ್ಲಿ ಕಾಣೋ ಬೆಟ್ಟಗುಡ್ಡಗಳು...ನಾನು ಅಲ್ಲಿ 2 ವರ್ಷ ಕಳ್ದಿದ್ದೇ ಗೊತ್ತಾಗಿರ್ಲಿಲ್ಲ. ನಾನು ಅಲ್ಲಿಯೇ ಪಿಯುಸಿ ಮಾಡಿದ್ದು. ಈ ಕಡೆ ಭಾಗಮಂಡಲದಿಂದ ಆ ಕಡೆ ತಾಳತ್ಮನೆ ತನಕ ಹೀಗೆ ಎಲ್ಲಾ ಕಡೆಗಳಿಂದ ಓದ್ಲಿಕ್ಕೆ ಬರ್ತಾರೆ. ಭಾಗಮಂಡಲದ ಕಾವೇರಿ ಹೈಸ್ಕೂಲ್ನಲ್ಲಿ ಎಸ್ಎಸ್ಎಲ್ಸಿ ಓದಿದವ್ರು, ಬೆಟಗೇರಿಯ ಉದಯ ಹೈಸ್ಕೂಲ್ನಲ್ಲಿ ಪಾಸ್ ಆದವ್ರು, ಇನ್ನು ಅದೇ ಅರುಣ ಪ್ರೌಢಶಾಲೇಲಿ ಓದಿದವ್ರು.. ಇಂಥ ತ್ರಿವೇಣಿ ಸಂಗಮವೇ ಚೇರಂಬಾಣೆ ಕಾಲೇಜಿನಲ್ಲಿ ಇರುತ್ತೆ. ಎಲ್ಲೆಲ್ಲಿಂದಲೋ ಬಂದವ್ರು ಕಾಲೇಜಿಗೆ ಸೇರಿ ತಿಂಗಳಲ್ಲೇ ಫ್ರೆಂಡ್ಸ್ ಆಗಿಬಿಡ್ತಾರೆ. ಈ ಥರ ರೆಡಿ ಆದ ಒಂದು ಟೀಂ `ನವಗ್ರಹ'. ಬೆಟಗೇರಿಯಿಂದ ಬರ್ತಿದ್ದ ಮಸೂದ್ ಈ ಟೀಂಗೆ ಲೀಡರ್. ಅವ್ನೂ ಸೇರ್ದ ಹಾಗೆ 9 ಮಂದಿ ಒಟ್ಟಿಗೆ ಇರ್ತಿದ್ದಿದ್ರಿಂದ ನಂ ರಾಮಕೃಷ್ಣ ಸರ್ ಆ ಟೀಂಗೆ `ನವಗ್ರಹ' ಅಂತ ಹೆಸರಿಟ್ಟಿದ್ದ್ರು...
ಆ `ನವಗ್ರಹ' ಟೀಂ ಮಾಡದ ಕಿತಾಪತಿಗಳೇ ಇರ್ಲಿಲ್ಲ... ಅದೆಲ್ಲಾ ಹುಡುಗಾಟದ ದಿನಗಳು.. ಏನು ಮಾಡಿದ್ರೂ, ಅದಕ್ಕೊಂದು ಸಿರಿಯಸ್ನೆಸ್ ಇರ್ತಿರ್ಲಿಲ್ಲ. `ನವಗ್ರಹ' ಟೀಂ ಕಿತಾಪತಿಗಳನ್ನು ಕೂಡ ನಮ್ಮ ಸರ್ಗಳು ಸೇರ್ದ ಹಾಗೆ ಯಾರೂ ಗಂಭೀರವಾಗಿ ತೆಗೆದುಕೊಂಡಿರ್ಲಿಲ್ಲ. ನಮ್ಗೂ ಅವ್ರ ಆಟೋಟೋಪಗಳನ್ನ ನೋಡೋದು ಒಂದು ಖುಷಿ. ನಮ್ ಕಾಲೇಜು ಪಕ್ಕದಲ್ಲೇ ಒಂದು ಕಾಫಿ ತೋಟ ಇತ್ತು. ಅದ್ರೊಳಗೆ ಪೈನಾಪಲ್, ಸಪೋಟ, ಹಲಸು ಬೆಳೀತ್ತಿದ್ರು. ಅಂದ್ರೆ, ವರ್ಷಪೂತರ್ಿ ಒಂದಲ್ಲಾ ಒಂದು ಹಣ್ಣು ಇದ್ದೇ ಇರ್ತಿತ್ತು. `ನವಗ್ರಹ' ಟೀಂ ಆ ತೋಟಕ್ಕೆ ಒಮ್ಮೆ ನುಗ್ಗಿತು ಅಂದ್ರೆ ಮುಗೀತು.. `ಕದಳಿವನದೊಳಗೆ ಕರಿ' ನುಗ್ಗಿದ ಹಾಗೆ ! ಅವ್ರು ತಂದಿದ್ದ್ರಲ್ಲಿ ನಮ್ಗೂ ಪಾಲು ಸಿಗ್ತಿತ್ತು ಅನ್ನಿ... ಗ್ರೌಂಡ್ನಲ್ಲಿ ಕೂತು ನಾವೆಲ್ಲಾ ಒಟ್ಟಿಗೆ ತಿಂತಿದ್ವಿ...ಮಸೂದ್ ಮೆಲ್ಲನೇ ಯಾರಿಗೂ ಗೊತ್ತಾಗದ ಹಾಗೆ ತಾನು ಲೈನ್ ಹೊಡೀತಿದ್ದ ಅನಿತಾಳಿಗೂ ತಲುಪಿಸಿಬಿಡ್ತಿದ್ದ.
ಈ `ನವಗ್ರಹ' ಟೀಂ ಮಾಡೋ ಕಳ್ಳ ಕೆಲ್ಸ ತೋಟದ ಓನರ್ಗೆ ಗೊತ್ತಾಗಿಬಿಟ್ಟಿತ್ತು. ನಂ ಪ್ರಿನ್ಸಿಪಾಲ್ಗೆ ಕಂಪ್ಲೇಂಟ್ ಮಾಡ್ದ. ಪ್ರಿನ್ಸಿಪಾಲ್ `ನವಗ್ರಹ' ಟೀಂನ ಎಲ್ಲಾ ಸದಸ್ಯರನ್ನ ಕರ್ದು, ಆ ಓನರ್ ಎದುರೇ `ಇನ್ನು ಹಾಗೆಲ್ಲಾ ಮಾಡ್ಬೇಡಿ ಆಯ್ತಾ' ಅಂತ ಹೇಳಿ ವಾಪಸ್ ಕಳ್ಸಿದ್ದ್ರು. `ಬಾಲ ನೆಟ್ಟಗಿದ್ದಿದ್ದು' ಒಂದು ವಾರ ಮಾತ್ರ... ಮತ್ತೆ, ಅದೇ ಹಳೇ ಚಾಳಿ ಮುಂದುವರೆಸಿತ್ತು `ನವಗ್ರಹ'.
ಕಾಲೇಜು ಎದುರಿಗೆ ರಸ್ತೆಯ ಮತ್ತೊಂದು ಕಡೆ ಚಿಕ್ಕ ಅಂಗಡಿ ಇತ್ತು. ಆ ಅಂಗಡೀಲಿ ಅಜ್ಜ ಅಥ್ವಾ ಅಜ್ಜಿ... ಇಬ್ರಲ್ಲಿ ಯಾರಾದ್ರು ಒಬ್ರು ಇರ್ತಿದ್ದ್ರು. ನಮ್ಮ `ನವಗ್ರಹ' ಟೀಂನಲ್ಲಿ ಒಂದು ಕೋಡ್ವಡರ್್ ಹರಿದಾಡ್ತಿತ್ತು. ಅದು `ಆಂಟಿ ಕ್ಯಾಪ್... ಅಂಕಲ್ ಕ್ಯಾಪ್' ! `ನವಗ್ರಹದ' ಒಂಬತ್ತು ಮಂದಿಗೆ ಬಿಟ್ರೆ ಬೇರೆ ಯಾರಿಗೂ ಆ ಕೋಡ್ವಡರ್್ನ ಸೀಕ್ರೆಟ್ ಗೊತ್ತಿರ್ಲಿಲ್ಲ. ನನಗೂ ಕುತೂಹಲ... ಮೊದ್ಲು ಆ ತಂಡದಲ್ಲಿ ಇದ್ದ ಚರಣ್ಗೆ ಕೇಳಿದ್ರೆ, ಅವ್ನೂ ಅಡ್ಡಡ್ಡ ತಲೆ ಆಡ್ಸಿದ್ದ.
ಕೊನೆಗೂ ಹೇಗೋ ಕೋಡ್ವಡರ್್ನ ಸೀಕ್ರೆಟ್ ಬಯಲಾಗಿತ್ತು. ತೋಟದಲ್ಲಿ ಹಣ್ಣ ಕದೀತ್ತಿದ್ದ ಈ ತುಂಟರು ಅಂಗಡೀಲೂ ತಮ್ಮ ಕೈಚಳಕ ತೋರಿಸ್ತಿದ್ದ್ರು. ಒಂದು ಪ್ಯಾಕೇಟ್ ಬಿಸ್ಕೆಟ್ಗೆ ದುಡ್ಡು ಕೊಟ್ಟು, ಮತ್ತೊಂದನ್ನ ಮೆಲ್ಲಗೆ ಎಗರಿಸೋದು.. 2 ಚಾಕಲೆಟ್ ಜೊತೆ ಮತ್ತೆ 5 ತೆಗೆದುಕೊಂಡು ಬಿಡೋದು.. ಈ ರೀತಿ ಮೋಸ ಅಂಗಡೀಲಿ ನಡೀತಿತ್ತು. ಅಜ್ಜ ಇದ್ದಾಗ ಹೀಗೆ ಮಾಡಿದ್ರೆ ಅದು `ಅಂಕಲ್ ಕ್ಯಾಪ್' ! ಅಜ್ಜಿ ಇದ್ದಾಗ ಕೈಚಳಕ ತೋರಿಸಿದ್ರೆ, ಅದು.. ಆಂಟಿ ಕ್ಯಾಪ್!
ಈಗ ಆ ನವಗ್ರಹಗಳು ಎಲ್ಲೆಲ್ಲಿ ಚದುರಿ ಹೋಗಿವೆಯೋ ಗೊತ್ತಿಲ್ಲ.... ಆದ್ರೆ ಆವತ್ತಿನ ನೆನಪುಗಳು ಮಾತ್ರ ಆಗಾಗ್ಗೆ ಬಂದು ಕಚಗುಳಿ ಇಡ್ತನೇ ಇರ್ತವೆ
Monday, 17 October 2011
ಬಾಪರೆ ಮೊಟ್ಟೆ ಗುಹೆ !
ತಲಕಾವೇರಿಲಿ ಬ್ರಹ್ಮಗಿರಿ ಬೆಟ್ಟ ಹತ್ತಿ ದೂರಕ್ಕೆ ಒಮ್ಮೆ ಕಣ್ಣಾಡಿಸಿದ್ರೆ, ಸ್ಟ್ಯಾಂಡಿಂಗ್ ಫ್ಯಾನ್ನಂಥ ಆಕೃತಿಗಳು ಕಾಣೋದಿಕ್ಕೆ ಸಿಕ್ತವೆ. ಅದು, ವಿಂಡ್ಮಿಲ್.... ವಿದ್ಯುತ್ ಉತ್ಪಾದನೆಗೆ ಅಂತ 80ರ ದಶಕದಲ್ಲಿ ಇವುಗಳನ್ನ ಇಲ್ಲಿ ಶುರುಮಾಡಿದ್ದ್ರು. ಒಂದು ವರ್ಷ ಅಷ್ಟೇ ಈ ವಿಂಡ್ಮಿಲ್ಗಳು ಕೆಲಸ ಮಾಡಿದ್ದು. ಮುತ್ತಿನಹಾರ ಫಿಲಂ ಶೂಟಿಂಗ್ ನಡಿವಾಗ ಇದು ಸರಿಯಾಗಿತ್ತು. `ಮಡಿಕೇರಿ ಸಿಪಾಯಿ...' ಹಾಡಿನ ದೃಶ್ಯಗಳಲ್ಲಿ ಇದನ್ನ ನೋಡ್ಬಹುದು. ಆದ್ರೆ ನಾನು ಈಗ ಹೇಳೋಕೆ ಹೊರಟಿರೋದು ವಿಂಡ್ಮಿಲ್ನ ಕಥೆ ಅಲ್ಲ, ಅಲ್ಲೇ ಇರೋ ಬಾಪರೆಮೊಟ್ಟೆ ಅನ್ನೋ ಅಚ್ಚರಿ ಬಗ್ಗೆ..
ಬ್ರಹ್ಮಗಿರಿ ಬೆಟ್ಟ ಸಾಲಿನಲ್ಲೇ ಬರೋ ನಾಲ್ಕೈದು ಗುಡ್ಡಗಳ ಮೇಲೆ ಗಾಳಿಯಂತ್ರಗಳನ್ನ ಇಟ್ಟಿದ್ದಾರೆ. ಈಗ ಇದೊಂಥರ ಪಳೆಯುಳಿಕೆ ಆಗಿ ನಿಂತುಬಿಟ್ಟಿದೆ. ಈ ಗುಡ್ಡಗಳ ಮತ್ತೊಂದು ಬದಿಯಲ್ಲೇ ಇರೋದು, ಬಾಪರೆಮೊಟ್ಟೆ. ಈ ಜಾಗದ ಬಗ್ಗೆ ಇರೋದು ಬರೀ ಅಂತೆಕಂತೆಗಳ ಕಥೆ ಅಷ್ಟೇ... ಅಲ್ಲಿ ಏನು ಇದೆ ಅನ್ನೋದನ್ನ ಹೋಗಿ ನೋಡಿದವರು ಯಾರೂ ಇದ್ದ ಹಾಗಿಲ್ಲ. ಅದೊಂದು ದೊಡ್ಡ ಗುಹೆ. ಬೆಟ್ಟದ ಬುಡದಲ್ಲೇ ಅದರ ದ್ವಾರ. ತಲಕಾವೇರಿ ಹತ್ತಿರದ ಚೇರಂಗಾಲ, ತಣ್ಣಿಮಾನಿ ಗ್ರಾಮಗಳಲ್ಲಿ ಆಗಾಗ್ಗೆ ಹುಲಿಗಳು ದಾಳಿ ಮಾಡ್ತಿರ್ತವೆ. ಕಾಡಿನಲ್ಲಿ ಮೇಯೋಕೆ ಹೋದ ದನಕರುಗಳು ಹುಲಿಗೆ ಬಲಿಯಾಗೋದು ಇಲ್ಲೆಲ್ಲಾ ಮಾಮೂಲು... ಇಲ್ಲಿನ ಜನಗಳು ನಂಬೋ ಪ್ರಕಾರ, ತಮ್ಮೂರಿಗೆ ಬರೋ ಹುಲಿಗಳು ವಾಸ ಮಾಡೋದು, ಇದೇ ಬಾಪರೆಮೊಟ್ಟೆ ಗುಹೇಲಿ !
ಒಬ್ಬ ವ್ಯಕ್ತಿ ಸಲೀಸಾಗಿ ನಡೆಯಬಹುದಾದ ಗುಹೆ ಅದು...ಸುಮಾರು 100 ಮೀಟರ್ ಉದ್ದಕ್ಕೆ ಸುರಂಗ ರೀತಿ ಇದೆ. ನಂತರ ಅದು ಬಾವಿಯ ರೂಪ ಪಡೆಯುತ್ತಂತೆ ! ಕೆಲವು ಧೈರ್ಯವಂತ ಹಳ್ಳಿಗರು ಈ ಸುರಂಗದೊಳಕ್ಕೆ ಹೋಗಿ ಬಾವಲಿಯ ಹಿಕ್ಕೆ ಸಂಗ್ರಹಿಸಿ ತರೋದೂ ಇದೆ. ಹಾಗಂತ ಅವ್ರೇನೂ ತುಂಬಾ ದೂರ ಏನೂ ಹೋಗೋದಿಲ್ಲ. ಸೂರ್ಯನ ಬೆಳಕು ಎಲ್ಲಿವರೆಗೆ ಬೀಳುತ್ತೋ ಅಲ್ಲಿ ತನಕ ಮಾತ್ರ ಅವ್ರ ಧೈರ್ಯ! ಭತ್ತದ ಬೆಳೆ ಕಟಾವು ಆದ್ಮೇಲೆ ಬೆಳೆಯೋ ಮೆಣಸಿನ ಗಿಡಕ್ಕೆ ಈ ಬಾವಲಿ ಹಿಕ್ಕೆ ಒಳ್ಳೇ ಗೊಬ್ಬರ!
ಬಾಪರೆಮೊಟ್ಟೆ ಗುಹೆ ಬಗ್ಗೆ ತುಂಬಾ ನಂಬಿಕೆಗಳಿವೆ. ಚೇರಂಗಾಲ ಮೂಲೆಯಿಂದ ಬರ್ತಿದ್ದ ಗೆಳೆಯ ಕೋಡಿ ಮಹೇಶ ಈ ಬಾಪರೆ ಮೊಟ್ಟೆ ಗುಹೆ ಬಗ್ಗೆ ತುಂಬಾ ಕಥೆಗಳನ್ನ ಹೇಳ್ತಿದ್ದ. ನಾವೆಲ್ಲಾ ಬಿಟ್ಟ ಬಾಯಿ ಬಿಟ್ಟ ಹಾಗೆ ಅದನ್ನೆಲ್ಲಾ ಕೇಳ್ತಿದ್ವಿ. ಅವ್ರ ಅಜ್ಜ ಕೋವಿ ಹಿಡ್ಕೊಂಡು ಆಗಾಗ್ಗೆ ಬೇಟೆಗೆ ಹೋಗ್ತಿದ್ದ್ರು. ಒಂದೊಂದು ಸಲ ಯಾವುದೇ ದೊಡ್ಡ ಪ್ರಾಣಿಗಳು ಸಿಗ್ತಿರ್ಲಿಲ್ಲ. ಬರೀ ಕೈನಲ್ಲಿ ಮನೆಗೆ ಹೋಗ್ಬೇಕಲ್ಲಾ ಅಂತ ಅವ್ರು, ಬಾಪರೆಮೊಟ್ಟೆ ಗುಹೆಗೆ ನುಗ್ಗಿ ಬಾವಲಿ ಹೊಡ್ಕೊಂಡು ಬರ್ತಿದ್ರಂತೆ. ಬಾಪರೆ ಮೊಟ್ಟೆ ಗುಹೆ ಒಳಗೆ ತುಂಬಾ ಕವಲುಗಳಿವೆಯಂತೆ... ಒಳಕ್ಕೆ ನುಗ್ಗಿದವ್ರಿಗೆ ಹೊರಗೆ ಬರೋಕೆ ದಾರಿಯೇ ಗೊತ್ತಾಗಲ್ವಂತೆ ! ಅದಕ್ಕೆ ನಮ್ಮ ಮಹೇಶನ ಅಜ್ಜ ಮತ್ತೆ ಅವ್ರ ಜೊತೆಯವ್ರು ಗುಹೆ ಒಳಗೆ ನುಗ್ಬೇಕಾದ್ರೆ ಮುನ್ನೆಚ್ಚರಿಕೆ ತೆಗೆದುಕೊಳ್ತಿದ್ದ್ರು. ಹೊರಗಿನ ಒಂದು ಗಿಡಕ್ಕೆ ದಾರ ಕಟ್ಟಿ, ಅದನ್ನ ಹಿಡ್ಕೊಂಡು ಗುಹೆ ಒಳಕ್ಕೆ ಹೋಗ್ತಿದ್ದ್ರಂತೆ. ಮತ್ತೆ ಅದನ್ನೇ ಹಿಡ್ಕೊಂಡು ಹೊರಕ್ಕೆ ಬರ್ತಿದ್ದ್ರಂತೆ.
ತಲಕಾವೇರಿಗೆ ಕೇರಳ ಹತ್ರವಾಗುತ್ತೆ. 30 ಕಿಲೋಮೀಟರ್ ಕಚ್ಚಾ ದಾರೀಲಿ ಹೋದ್ರೆ, ಕೇರಳದ ಮುಂಡ್ರೋಟು ಅನ್ನೋ ಊರು ಸಿಗುತ್ತೆ. ಈ ಬಾಪರೆಮೊಟ್ಟೆಯ ಗುಹೆ ಇದ್ಯಲ್ಲಾ...ಇಲ್ಲಿಂದ ಮುಂಡ್ರೋಟಿಗೆ ಸಂಪರ್ಕ ಇದ್ಯಂತೆ. ಅಲ್ಲಿಂದ ಅರಬ್ಬೀಸಮುದ್ರದ ದಂಡೆ ತನಕವೂ ಈ ಗುಹೆಯಿಂದ ದಾರಿ ಇದ್ಯಂತೆ! ಇಂಥ ಕಥೆಗಳಿಗೇನೂ ಇಲ್ಲಿ ಕಡಿಮೆ ಇಲ್ಲ.
ನಮ್ಮ ಗೆಳೆಯರ ಬಳಗ, ಬ್ರಹ್ಮಗಿರಿ ಮತ್ತು ಸುತ್ತಮುತ್ತಲಿನ ಎಲ್ಲಾ ಬೆಟ್ಟಗುಡ್ಡಗಳನ್ನ ಹತ್ತಿ ಇಳ್ದಿದೆ. ಇಲ್ಲಿನ ಇಂಚು, ಇಂಚು ಜಾಗವೂ ನಮಗೆ ಪರಿಚಿತವೇ... ಆದ್ರೆ ಏಕೋ ಏನೋ ಬಾಪರೆ ಮೊಟ್ಟೆಯ ಆ ಗುಹೆ ಒಳಗೆ ಹೋಗ್ಬೇಕು ಅನ್ನೋ ಆಸೆ ಮಾತ್ರ ಈಡೇರ್ಲಿಲ್ಲ... ಗೆಳೆಯರೆಲ್ಲಾ ಈಗ ಉದ್ಯೋಗ ನೆಪದಲ್ಲಿ ಒಂದೊಂದು ಕಡೆ ಹರಡಿ ಹೋಗಿದ್ದೀವಿ. ಮತ್ತೆ ಈ ಬಾಪರೆ ಮೊಟ್ಟೆ `ಸಾಹಸ' ನೆಪದಲ್ಲಾದ್ರೂ ಒಂದಾಗ್ಬಹುದೇನೋ.... ಆ ದಿನಕ್ಕಾಗಿ ಕಾಯ್ತಿದ್ದೀನಿ.
Sunday, 16 October 2011
ಜಾತ್ರೆ ಸಂಭ್ರಮ....
ತಲಕಾವೇರಿ ಜಾತ್ರೆ ಅಂದ್ರೆ ಸಾಕು, ನಮ್ಗೆಲ್ಲಾ ಅದು ತುಂಬಾ ಸಂಭ್ರಮದ ಕ್ಷಣ.... ಅದಕ್ಕಾಗಿ ವರ್ಷ ಪೂತರ್ಿ ಕಾದಿತರ್ೇವೆ. ಬೇಸಿಗೆ ರಜೆ ಕಳ್ದ ಕೂಡ್ಲೇ, ಮಳೆಯಲ್ಲೇ ಶಾಲೆಗೆ ಹೋಗೋ ಸಂಕಷ್ಟ... ಅದ್ಕೆ ಹೊಂದಿಕೊಂಡೆವು ಅಂತಿರುವಾಗ್ಲೇ ಮಳೆಗಾಲದ ರಜೆ ಬಂದಿರುತ್ತೆ. ಆ 15 ದಿನದ ರಜೆ ಮುಗ್ದು ಶಾಲೆ ಶುರುವಾದ್ರೂ ಮಳೆ ಜಿನುಗುತ್ತಲೇ ಇರುತ್ತೆ. ಹೊರಗೆಲ್ಲೂ ಹೋಗೋ ಹಾಗಿಲ್ಲ... ಇಂಥ ಮಳೆ ಕಡಿಮೆ ಆಗೋದು, ಅಕ್ಟೋಬರ್ ಕಾಲಿಟ್ಟಾಗಲೇ... ಅದು ಜಾತ್ರೆಯ ತಿಂಗಳು. ಅಕ್ಟೋಬರ್ ಮೊದಲ ದಿನದಿಂದಲೇ ಸಿದ್ಧತೆ ಶುರುವಾಗಿರುತ್ತೆ. ಶಾಲಾ ಮೈದಾನದಲ್ಲಿ ಬೆಳೆದಿರುವ ಕಳೆ ತೆಗೆಯೋದು, ಮನೆ ಅಂಗಳ ಕ್ಲೀನ್ ಮಾಡೋದು, ಮನೆ ಗೋಡೆಗಳಿಗೆ ಸುಣ್ಣಬಣ್ಣ ಬಳಿಯೋದು...ಈಗ್ಲೂ ಎಲ್ಲಾದ್ರೂ ಪೇಯಿಂಟ್ ಸ್ಮೆಲ್ ಬಂದ್ರೆ ಅದೆಲ್ಲಾ ಕಣ್ಣು ಮುಂದೆ ಬರುತ್ತೆ. ಜಾತ್ರೆಗೆ ಇನ್ನು ಒಂದು ವಾರ ಬಾಕಿ ಇದೆ ಅನ್ನುವಾಗ ನಮ್ಮ ಸಡಗರಕ್ಕೆ ಮಿತಿಯೇ ಇತರ್ಿಲರ್ಿಲ್ಲ... ಭಾಗಮಂಡಲದಲ್ಲಿ ನಮಗೊಂದು ಅಂಗಡಿ ಇತ್ತು. ಜಾತ್ರೆ ಟೈಂನಲ್ಲಿ, ಕುಂಕುಮ, ತೆಂಗಿನಕಾಯಿ, ಕಪರ್ೂರ, ಕೊಬ್ಬರಿ, ಕಲ್ಲುಸಕ್ಕರೆ, ಒಣದ್ರಾಕ್ಷಿ ... ಇಂಥವೆಲ್ಲಾ ಭರ್ಜರಿಯಾಗಿ ಮಾರಾಟ ಆಗ್ತವೆ. ಇದ್ನೆಲ್ಲಾ ಮೈಸೂರಿನಿಂದ ತರಲಾಗ್ತಿತ್ತು. ಹಾಗಾಗಿ ಅಪ್ಪನ ಜೊತೆ ವರ್ಷಕ್ಕೆ ಒಂದು ಸಲ ಮೈಸೂರಿಗೆ ಹೋಗೋ ಅವಕಾಶ ನನಗೆ ಸಿಗ್ತಿತ್ತು. ಅದ್ನ ನಾನು ಯಾವತ್ತೂ ತಪ್ಪಿಸಿಕೊಳ್ತಿರ್ಲಿಲ್ಲ.. ಇನ್ನು ಈ ಜಾತ್ರೆಗೆ ಅಂತ ಬಂದಿರ್ತವಲ್ಲಾ, ವಿಶೇಷ ಅಂಗಡಿಗಳು, ಇದೂ ನಮ್ಮ ಆಕರ್ಷಣೆಯ ಕೇಂದ್ರವೇ...ಆ ವರ್ಷ ಏನು ಹೊಸ ಆಟಿಕೆಗಳು ಬಂದಿವೆ, ಯಾವುದನ್ನ ಪಚರ್ೇಸ್ ಮಾಡೋದು...ಯಾವ ಅಂಗಡಿಯಿಂದ ಕಡ್ಲೆಪುರಿ ಎಗರಿಸೋಕೆ ಸುಲಭ... ಹೀಗೆ ನಮ್ಮದೇ ಆದ ಲೆಕ್ಕಾಚಾರಗಳು ನಡೀತ್ತಿದ್ವು. ಜಾತ್ರೆ ದಿವಸ ಮತ್ತು ಅದರ ಹಿಂದಿನ ದಿವಸ ಬೇರೆ ಬೇರೆ ಇಲಾಖೆಗಳು ಚಿಕ್ಕ ಸ್ಕ್ರಿನ್ ಮೇಲೆ ಸಾಕ್ಷ್ಯಚಿತ್ರಗಳನ್ನ ತೋರಿಸ್ತಿದ್ದವು. ಈಗಿನ ಹಾಗೆ ಆಗ ಟಿವಿಗಳು ಇರಲಿಲ್ಲ...ಹಾಗಾಗಿ ನಮ್ಗೆ ಆವತ್ತೆಲ್ಲಾ ಅದೇ ದೊಡ್ಡ ಮನೋರಂಜನೆ... ಯಾವುದೋ ಸಿನಿಮಾ ನೋಡಿದ ಅನುಭವ! ದಿನಾ ಬೆರಳೆಣಿಕೆಯಷ್ಟು ವಾಹನಗಳನ್ನ ನೋಡ್ತಿದ್ದ ನಮ್ಗೆ, ಜಾತ್ರೆಗೆ ಹರಿದು ಬರ್ತಿದ್ದ ವಾಹನಗಳ ಸಾಲು, ಕೆಎಸ್ಆರ್ಟಿಸಿಯ ವಿಶೇಷ ಬಸ್ಗಳನ್ನ ಕಣ್ತುಂಬಿಸಿಕೊಳ್ಳೋದು ಒಂದು ಹಬ್ಬವೇ... ಭಾಗಮಂಡಲದಲ್ಲಿ ಆಗ ಇನ್ನೂ ಪೂರ್ಣ ಪ್ರಮಾಣದ ಪೊಲೀಸ್ ಸ್ಟೇಷನ್ ಬಂದಿರ್ಲಿಲ್ಲ.. ಒಂದು ಔಟ್ ಪೋಸ್ಟ್ ಇತ್ತಷ್ಟೇ... ಅಲ್ಲಿದ್ದಿದ್ದು ಒಬ್ಬ ಮುಖ್ಯಪೇದೆ, ಎರಡೋ, ಮೂರೋ ಪೊಲಿಸ್ರು. ಇಂಥ ಊರು, ಜಾತ್ರೆ ದಿನ ಖಾಕಿ ಸಮುದ್ರವೇ ಆಗಿಬಿಡ್ತಿತ್ತು. ಸಾಕ್ಷಾತ್ ಎಸ್ಪಿ ಸಾಹೇಬ್ರೇ ಬಂದಿರ್ತಿದ್ರು. ನಮ್ಮ ಮನೆ ಹಿಂದೆನೇ ಪೊಲೀಸ್ ಔಟ್ ಪೋಸ್ಟ್ ಇದ್ದಿದ್ದು. ಮುಖ್ಯಪೇದೆ ಯಾವಾಗ್ಲೂ ಕಾಲು ಮೇಲೆ ಕಾಲು ಹಾಕಿ ಕೂತ್ಕೊಳ್ತಿದ್ದ ಕುಚರ್ೀಲಿ ಎಸ್ಪಿ ಕೂತರ್ಿದ್ರು. ಅಲ್ಲಿಂದಲೇ ಪೊಲೀಸ್ರಿಗೆ, ಹೋಂಗಾಡ್ಸರ್್ಗೆ ಎಲ್ಲೆಲ್ಲಿ ಕೆಲಸ ಮಾಡ್ಬೇಕು ಅನ್ನೋ ಜವಾಬ್ದಾರಿ ಕೊಡಲಾಗ್ತಿತ್ತು. ಫೈರ್ ಎಂಜಿನ್ನವ್ರೂ ಇರ್ತಿದ್ರು. ಇದನ್ನೆಲ್ಲಾ ನಾವು ಬಿಟ್ಟ ಕಣ್ಣು ಬಿಟ್ಟ ಹಾಗೇ ನೋಡ್ತಿದ್ವಿ.
ಇವತ್ತು ಭಾಗಮಂಡಲ ಜಾತ್ರೆ.. ಈಗ ಭಾಗಮಂಡಲ, ತಲಕಾವೇರಿ ದೇವಾಸ್ಥಾನಗಳು ಹೊಸತನದಿಂದ ನಳನಳಿಸ್ತಿವೆ. ಬರೋ ಭಕ್ತರ ಸಂಖ್ಯೆನೂ ಜಾಸ್ತಿ ಆಗಿದೆ. ಈಗ ಅಲ್ಲಿ ನಮ್ಮ ಜಾಗಕ್ಕೆ ಮತ್ತೊಂದು ತಲೆ ಮಾರು ಬಂದು ಕೂತಿದೆ. ಅದೇ ಮುಗ್ಧತೆ, ಅದೇ ಕಾತುರದ ಕಣ್ಣುಗಳಿಂದ ಜಾತ್ರೆಯನ್ನ ಅನುಭವಿಸೋಕೆ ರೆಡಿಯಾಗಿದೆ....
Monday, 10 October 2011
ತಿಮ್ಮಯ್ಯ ಮಾಷ್ಟ್ರು....
ಮೂರು ಅಡಿಯೂ ಎತ್ತರ ಇಲ್ಲದ ವಾಮನ ಮೂತರ್ಿ... ಅವ್ರು ಹತ್ತಿರ ಬಂದ್ರು ಅಂದ್ರೆ ಬೀಡಿಯ ಕಮಟು ವಾಸನೆ ! ಯಡ್ಯೂರಪ್ಪ ಥರ ಯಾವಾಗ್ಲೂ ಸಫಾರಿ ಹಾಕೋ ಮನುಷ್ಯ.... ವಿದ್ಯಾಥರ್ಿಗಳ ಪಾಲಿಗೆ ಯಮಸ್ವರೂಪಿ... ಅವ್ರೇ, `ತಿಮ್ಮಯ್ಯ ಮಾಷ್ಟ್ರು'
ತಿಮ್ಮಯ್ಯ ಮಾಷ್ಟ್ರು ಒಂಥರ ವಿಶಿಷ್ಟ ವ್ಯಕ್ತಿತ್ವದ ಮನುಷ್ಯ. ಅವ್ರು ಬೀಡಿ ಸೇದಿಕೊಂಡೇ ಮಕ್ಕಳಿಗೆ ಧೂಮಪಾನದ ಅಪಾಯಗಳ ಬಗ್ಗೆ ಮಾತಾಡ್ತಿದ್ದ್ರು. ಏಕಂದ್ರೆ ಮಾಷ್ಟ್ರು ಪಾಠ ಮಾಡ್ತಿದ್ದಿದ್ದು ವಿಜ್ಞಾನ ಸಬ್ಜೆಕ್ಟ್ ! ಇಂಗ್ಲೀಷ್ ಕೂಡ ಹೇಳಿಕೊಡ್ತಿದ್ದ್ರು. ಏಳನೇ ಕ್ಲಾಸ್ಗೆ ಅವ್ರೇ ಕ್ಲಾಸ್ ಟೀಚರ್...! ಇಂಥ ತಿಮ್ಮಯ್ಯ ಮಾಷ್ಟ್ರನ್ನ ನೆನೆಸಿಕೊಂಡ್ರೆ, ತಪ್ಪುಮಾಡಿದ, ಹೋಮ್ವಕರ್್ ಮಾಡದ ಮಕ್ಕಳ ಚಡ್ಡಿ ಒದ್ದೆ ಆಗಿಬಿಡ್ತಿತು !
ನಮ್ ಕಡೆ ಮಳೆಗಾಲಕ್ಕೆ 15 ದಿನ ರಜೆ ಕೊಡ್ತಾರೆ. ಆಗ ಕೈ ತುಂಬಾ ಹೋಮ್ವಕರ್್ ಕೂಡ ಇರುತ್ತೆ.... ನನ್ನಂಥ ಸೋಮಾರಿಗಳು ಇದ್ರಿಂದೆಲ್ಲಾ ತಪ್ಪಿಸಿಕೊಳ್ಳೋದೇ ಹೆಚ್ಚು. ಹೋಮ್ವಕರ್್ ಮಾಡದೇ ಕ್ಲಾಸ್ಗೆ ಹೋಗಿ, ಏನಾದ್ರೂ ಸುಳ್ಳು ಹೇಳಿ ಬಚಾವಾಗಿ ಬಿಡ್ತಿದ್ದೆವು. 6ನೇ ಕ್ಲಾಸ್ ತನಕ ಇದಕ್ಕೆಲ್ಲಾ ಯಾವುದೇ ಅಡ್ಡಿ ಆಗಿರ್ಲಿಲ್ಲ. ಆದ್ರೆ 7ನೇ ಕ್ಲಾಸ್ನಲ್ಲಿ ಮಾತ್ರ ತಿಮ್ಮಯ್ಯ ಮಾಷ್ಟ್ರಿಂದ ತಪ್ಪಿಸಿಕೊಳ್ಳೋಕೆ ಕಷ್ಟ ಆಗಿಬಿಡ್ತು. ಪುಸ್ತಕ ತರ್ಲಿಕ್ಕೆ ಮರ್ತು ಹೋಯ್ತು ಅಂತ ಹೇಳಿ ಮೊದಲ ದಿನ ಹೇಗೋ ಸುಧಾರಿಸಿಕೊಂಡೆ ! ನನ್ನ ಸೋಮಾರಿ ಗೆಳೆಯರದ್ದು ಇದೇ ನೆಪ ! ಮಾಷ್ಟ್ರು ಸೈಲೆಂಟಾಗಿ ನಮ್ಮ ಮುಖ ನೋಡಿ, ಸರಿ ನಾಳೆ ತಂದು ತೋರ್ಸಿ ಅಂತ ಹೇಳಿ ಆವತ್ತು ಬಿಟ್ಟುಬಿಟ್ಟ್ರು. ಹೋಮ್ವಕರ್್ ಮಾಡಿದ್ದ್ರೆ ತಾನೆ, ನಾವು ತಂದು ತೋರಿಸೋದು ! ಎರಡನೇ ದಿನ ನಮ್ಮದ್ದು ಸಾಮೂಹಿಕ ಚಕ್ಕರ್ ! ಮೂರನೇ ದಿನಕ್ಕೆ ಮಾಷ್ಟ್ರು ಮರ್ತುಬಿಡ್ತಾರೆ ಅನ್ನೋದು ನಮ್ಮ ಯೋಚನೆ ಆಗಿತ್ತು. ಆ ದಿನವೂ ಬಂತು. ಮಾಷ್ಟ್ರು ಅಟೆಂಡೆನ್ಸ್ ಕರೆಯುವಾಗ್ಲೇ, ನಾವು ಹಿಂದಿನ ದಿನ ಯಾಕೆ ಬಂದಿರ್ಲಿಲ್ಲ ಅನ್ನೋದನ್ನ ಕೇಳಿದ್ರು. ನಾನು ಜ್ವರ ಅಂತ ಹೇಳಿದ್ರೆ, ಇನ್ನೊಬ್ಬನಿಗೆ ಮನೇಲಿ ಗದ್ದೆ ನಾಟಿ, ಮತ್ತೊಬ್ಬನಿಗೆ ಎತ್ತುಗೆ ಹುಷಾರು ಇರ್ಲಿಲ್ಲ! ಹೀಗೆ ಒಬ್ಬೊಬ್ಬರದ್ದು ಒಂದೊಂದು ನೆಪ. ಅದನ್ನೂ ಮಾಷ್ಟ್ರು ಮೌನವಾಗೇ ಕೇಳಿಸಿಕೊಂಡ್ರು. ನಮ್ಗೆಲ್ಲಾ ಒಳಗೆಲ್ಲಾ ಒಂಥರ ಖುಷಿ... ಅಬ್ಬಾ, ತಪ್ಪಿಸಿಕೊಂಡು ಬಿಟ್ವಲ್ಲಾ ಅನ್ನೋ ಸಂತಸ ! ಆದ್ರೆ ಅದು ತುಂಬಾ ಹೊತ್ತು ಇರ್ಲಿಲ್ಲ ! ನಮ್ಮ ಸೋಮಾರಿ ಗೆಳೆಯರಲ್ಲಿ ಒಬ್ಬನಾದ ಪ್ರವೀಣನನ್ನ ಕರ್ದು, ಸ್ಟಾಫ್ ರೂಮ್ನಿಂದ ಬೆತ್ತ ತರ್ಸಿದ್ರ್ರು... ಮೊದ್ಲ ಬಲಿ ಪಶು ಅವ್ನೇ...`ಪ್ರವೀಣ್, ಎಲ್ಲಿ ನಿನ್ನ ಹೋಮ್ ವಕರ್್?' ಅಷ್ಟೇ.... ನಮ್ಗೆಲ್ಲಾ ಕೈ ಕಾಲು ನಡುಕ ಶುರುವಾಯ್ತು. ಹೋಮ್ವಕರ್್ ಮಾಡಿದ್ರಲ್ಲಾ ತೋರಿಸೋಕೆ? ನಮ್ಗೆ 5 ಹುಡುಗರಿಗೆ ಸಾಮೂಹಿಕ ಲಾಠಿ ಪ್ರಹಾರ ಆಯ್ತು.... ಕೋಲು ಮುರಿಯೋ ತನಕ ಅವ್ರ ಸಿಟ್ಟು ಇಳ್ದಿರ್ಲಿಲ್ಲ... ಅಲ್ಲಿಗೆ ನಿಲ್ಲಲಿಲ್ಲ ಅವ್ರ ಶೌರ್ಯ, ಸಂಜೆ ಶಾಲೆಯಿಂದ ಮನೆಗೆ ಹೋಗುವಾಗ ಈ ವಿಷಯವನ್ನ ಊರಿಗೆಲ್ಲಾ ಕೇಳೋ ಹಾಗೆ ಹೇಳಿಕೊಂಡು ಬಂದುಬಿಟ್ಟ್ರು. ` ಏಯ್ ನೋಡ್ರಾ, ನಿನ್ನ ಮಂಙಂಗೆ ಲಾಯ್ಕ ಬಿಟ್ಟೊಳೆ.. ಇನ್ನಾದ್ರೂ ಅವಂಗೆ ಸರಿಯಾಗಿ ಓದಿಕೆ ಹೇಳು' ಅಂತ ನಮ್ಮೆಲ್ಲರ ಅಪ್ಪಂದಿರಿಗೆ ಫಿಟ್ಟಿಂಗ್ ಇಟ್ಟುಬಿಟ್ಟ್ರು. ನಂತ್ರ ನಂ ಮನೆಗಳಲ್ಲಿ 2ನೇ ಇನ್ನಿಂಗ್ಸ್ ಕೂಡ ನಡ್ದು ಹೋಯ್ತು.
ಆವತ್ತು ತಿಮ್ಮಯ್ಯ ಮಾಷ್ಟ್ರು ವಿಜ್ಞಾನ ಪಾಠ ಮಾಡ್ತಿದ್ದ್ರು. ನೀರಿನ ಬಗ್ಗೆ ಹೇಳ್ತಿದ್ದ್ರು. ನೀರಿಗೆ ಬಣ್ಣ ಇಲ್ಲ ಅನ್ನೋದು ಅವ್ರು ಹೇಳಿದ ವಿಷಯಗಳಲ್ಲಿ ಒಂದು. ಪಾಠ ಎಲ್ಲಾ ಮುಗಿದ್ಮೆಲೆ ಪ್ರಶ್ನೆ ಕೇಳೋ ಅಭ್ಯಾಸ ಅವ್ರಿಗಿತ್ತು. `ನೀರಿನ ಬಣ್ಣ ಯವುದು?' ಅಂತ ಮಾಷ್ಟ್ರು ಕೇಳಿದಾಗ `ನೀರಿಗೆ ಬಣ್ಣ ಇಲ್ಲ' ಅಂತ ನಾವೆಲ್ಲಾ ಒಟ್ಟಿಗೆ ಹೇಳಿದ್ವಿ... ಆದ್ರೆ ಹಿಂದಿನ ಬೆಂಚಿನಿಂದ ಯಾವುದೋ ಒಂದು ಧ್ವನಿ `ನೀರಿನ ಬಣ್ಣ ಬಿಳಿ' ಅಂತ ಹೇಳ್ದ ಹಾಗೆ ಆಯ್ತು. `ವೇರಿ ಗುಡ್... ನೀರಿನ ಬಣ್ಣ ಬಿಳಿ...ಸರಿಯಾದ ಉತ್ತರ. ಯಾರಪ್ಪ ಅದು ಹೇಳಿದ್ದು? ಎದ್ದು ನಿಲ್ಲಿ...' ಅಂತ ಮಾಷ್ಟ್ರು ಹೇಳಿದ್ರು... ಆ ಉತ್ತರ ಹೇಳಿದ್ದು ತಲಕಾವೇರಿಯಿಂದ ಬರ್ತಿದ್ದ ಸುನಿಲ್... ಖುಷಿಯಿಂದಲೇ ಎದ್ದು ನಿಂತ... ಅಷ್ಟೇ.. ಈ ನಮ್ಮ ತಿಮ್ಮಯ್ಯ ಮಾಷ್ಟ್ರಿಗೆ ಮೈಯೆಲ್ಲಾ ಉರ್ದು ಹೋದ ಹಾಗೆ ಆಯ್ತು... ಸೂಪರ್ಮ್ಯಾನ್ ಮೈಯೊಳಗೆ ಆವಾಹನೆ ಆಗಿಬಿಟ್ಟ. ಪಾಠ ಮಾಡ್ತಿದ್ದಲ್ಲಿಂದ ಹಿಂದಿನ ಬೆಂಚಿಗೆ, ಡೆಸ್ಕ್ನಿಂದ ಡೆಸ್ಕ್ಗೆ ಹಾರುತ್ತಲೆ ತಲುಪಿದ್ರು... ಡೆಸ್ಕ್ ಮೇಲೆ ಕುಕ್ಕರಗಾಲಿನಲ್ಲಿ ಕೂತ್ಕೊಂಡು ನಿಂತಿದ್ದ ಸುನಿಲ್ನ ಎರಡೂ ಕೆನ್ನೆಗೆ ತಮ್ಮ ಕೈಸೋಲುವಷ್ಟೂ ಹೊಡೆದ್ರು... ಅವ್ನು `ನೀರಿಗೆ ಬಣ್ಣ ಇಲ್ಲ' ಅಂತ ಹೇಳಿದ್ಮೆಲೆನೇ ಬಿಟ್ಟಿದ್ದು.
ಇನ್ನೊಂದು ದಿನ ಇಂಗ್ಲಿಷ್ ಪಾಠ ಮಾಡ್ತಿದ್ದ್ರು... ಆಗ `ಬಲೂನ್ ಮ್ಯಾನ್' ಅನ್ನೋ ಒಂದು ಪದ್ಯ ಇತ್ತು. ಪರೀಕ್ಷೆಗಾಗಿ ಪದ್ಯವನ್ನ ಬಾಯಿಪಾಠ ಮಾಡಿಕೊಳ್ಳಬೇಕಿತ್ತು....ಅದನ್ನ ಬೋಡರ್್ ಹತ್ರ ನಿಂತು, ಮಾಷ್ಟ್ರ ಮುಂದೆ ಹೇಳ್ಬೇಕಿತ್ತು...ಒಬ್ಬೊಬ್ರಾಗಿ ಹೇಳ್ತಾ ಬಂದ್ರು... ಜಗದೀಶನ ಸರದಿ ಬಂತು. ಆ ಪದ್ಯದಲ್ಲಿ `ಇಫ್ ದೇರ್ ಈಸ್ ವಿಂಡ್ ಅಟ್ ಆಲ್' ಅನ್ನೋ ಸಾಲು ಬರುತ್ತೆ. ಆ ಜಗದೀಶನಿಗೆ `ಇಫ್' ಅನ್ನೊದಿಕ್ಕೆ ಬರ್ತಿರ್ಲಿಲ್ಲ. `ಇಪ್' ಅಂತನೇ ಹೇಳ್ತಿದ್ದ... ತಿಮ್ಮಯ್ಯ ಮಾಷ್ಟ್ರು ಎಷ್ಟೇ ತಿದ್ದಿ ಹೇಳಿದ್ರೂ ಜಗದೀಶನ ಬಾಯಲ್ಲಿ ಮಾತ್ರ `ಇಫ್', `ಇಪ್' ಆಗಿಯೇ ಉಳ್ಕೊಂಡುಬಿಡ್ತು....ಮಾಷ್ಟ್ರಿಗೆ ಸಿಟ್ಟು ನೆತ್ತಿಗೆ ಏರ್ತು.... ಬಿಳಿ ಕಲರ್ನ ಎರಡು ರೆನಾಲ್ಡ್ ಪೆನ್ಗಳನ್ನ ತಕ್ಕೊಂಡ್ರು. ಜಗದೀಶ್ನ ಬಾಯಿಯಲ್ಲಿ ತುಟಿಯ 2 ಮೂಲೆಗೂ ಒಂದೊಂದು ಪೆನ್ನು ಇಟ್ಟು. `ಈಗ ಹೇಳು..ಇಫ್...' ಏನಾಶ್ಚರ್ಯ! ಜಗದೀಶನ ಬಾಯಲ್ಲಿ ಬರ್ತಿದ್ದ `ಇಪ್' `ಇಫ್' ಆಗೇ ಬಿಡ್ತು... ಅಲ್ಲಿಂದ ಅವ್ನು ಯಾವತ್ತೂ ಅಂಥ ತಪ್ಪು ಮಾಡೇ ಇಲ್ಲ. ಈಗ ಜಗದೀಶ್ ಆಮರ್ಿಯಲ್ಲಿದ್ದಾನೆ. ಅವ್ನನ್ನನ್ನ ನಾವೇಲ್ಲಾ ಗುರುತಿಸೋದು `ಇಪ್' ಜಗದೀಶ್ ಅಂತನೇ....
7ನೇ ಕ್ಲಾಸ್ನ ವಾಷರ್ಿಕ ಪರೀಕ್ಷೆ ಮುಗ್ದಿತ್ತು... ರಿಸಲ್ಟ್ ಬರ್ಬೇಕಿತ್ತಷ್ಟೇ. ಆವತ್ತು ಏಪ್ರಿಲ್ 5 ಅಥವಾ ಆರನೇ ತಾರೀಕು ಇರ್ಬೇಕು ಅಂತ ಕಾಣುತ್ತೆ. ಗಿರಿ, ಎಸ್ಎಸ್ಎಲ್ಸಿ ಎಕ್ಸಾಂಗೆ ರೆಡಿ ಆಗ್ತಿದ್ದ. ನಾನು ನಮ್ಮ ಮನೆ ಹಿತ್ತಲಲ್ಲಿ ಏನೋ ಆಟ ಆಡ್ಕೊಂಡು ಕೂತಿದ್ದೆ. ತಿಮ್ಮಯ್ಯ ಮಾಷ್ಟ್ರು, `ಏಯ್ ಸುನಿಲ್' ಅಂತ ಕರ್ಕೊಂಡು ಸೀದಾ ನಮ್ಮ ಮನೆ ಹಿತ್ತಲಿಗೆ ಬಂದವ್ರೇ, ನನ್ನ ಎರಡೂ ಕೆನ್ನೆಗೆ ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಹೊಡ್ದ್ರು. ನಂತರ ಕೆನ್ನೆಗೆ ಒಂದು ಕಿಸ್ ಕೊಟ್ಟು, `ಮಂಙ, ನೀನ್ ಸೈನ್ಸ್ ಎಕ್ಸಾಂ ತುಂಬಾ ಲಾಯ್ಕ ಬರ್ದೊಳಾ...ಎಲ್ಲರ್ಕಿಂತ ಜಾಸ್ತಿ ಮಾರ್ಕ್ ನಿಂಗೆ ಸಿಕ್ಕಿಟ್ಟು... ಇನ್ನೂ ಲಾಯ್ಕ ಓದೋಕು ಆತಾ..' ಅಂತ ಹೇಳಿ ಸೀದಾ ಹೊರಟು ಬಿಟ್ಟ್ರು, ತಿಮ್ಮಯ್ಯ ಮಾಷ್ಟ್ರು....
ಈಗ ಒಮ್ಮೊಮ್ಮೆ ಯಾವುದಾದ್ರು ಸ್ಕೂಲ್ಗಳಲ್ಲಿ ಅಧ್ಯಾಪಕರು ಮಕ್ಳನ್ನ ಶಿಕ್ಷಿಸಿದ್ರೆ, ಅದು ದೊಡ್ಡ ಸುದ್ದಿ ಆಗಿಬಿಡುತ್ತೆ. ಸುದ್ದಿಮನೇಲಿ ಇರೋ ನನಗೆ ಆಗ ತಿಮ್ಮಯ್ಯ ಮಾಷ್ಟ್ರ ಸಿಟ್ಟು, ಪ್ರೀತಿ, ವಿದ್ಯಾಥರ್ಿಗಳ ಮೇಲಿನ ಕಾಳಜಿ ನೆನಪಾಗುತ್ತೆ... ವೈಯಕ್ತಿಕವಾಗಿ ಅವ್ರು ಹೇಗೇ ಇರ್ಲಿ, ಅಂಥ ಮೇಷ್ಟ್ರು ಸಿಕ್ಕಿಲ್ಲ ಅಂದ್ರೆ ನಾವೇನು ಆಗಿಬಿಡ್ತಿದ್ವೋ ಗೊತ್ತಿಲ್ಲ...
Wednesday, 5 October 2011
ಕೋಪಟ್ಟಿ ಬೆಟ್ಟ
ಕೋಪಟ್ಟಿ ಬೆಟ್ಟ
ಕತ್ತಲ ರಾತ್ರಿ... ದೂರದಲ್ಲಿ ಮಿಂಚು ಹುಳ ಹಾರಾಡಿದಂತೆ ಕಾಣೋ ಮಡಿಕೇರಿಯ ಬೆಳಕು... ಮತ್ತೊಂದು ಕಡೆ ಸಂಪಾಜೆಯ ಘಟ್ಟ ಹತ್ತೋ, ಇಳಿಯೋ ಲಾರಿ - ಬಸ್ಗಳ ಏದುಸಿರು...ಹೆಡ್ಲೈಟ್ಗಳ ಪ್ರಕಾಶಮಾನ ಕೋಲು... ಫೆಬ್ರವರಿಯ ಚಳಿಗಾಳಿ ! ಇದು ಕೋಪಟ್ಟಿಬೆಟ್ಟದ ಮೇಲೆ ನಮಗಾದ ಅನುಭವ....
ನಾನಾಗ ಪಿಯುಸಿಯಲ್ಲಿದ್ದೆ. ಚೇರಂಬಾಣೆ ಅರುಣ ಜೂನಿಯರ್ ಕಾಲೇಜು ಎದುರು ನಿಂತು ನೋಡಿದ್ರೆ.... ದೂರದಲ್ಲಿ ಕಾಣುತ್ತೆ, ಕೋಪಟ್ಟಿಬೆಟ್ಟ. ಅದನ್ನ ನೋಡಿದಾಗೆಲ್ಲಾ ಅಲ್ಲಿಗೆ ಒಮ್ಮೆ ಹೋಗ್ಬೇಕಲ್ಲಾ ಅನ್ನೋ ಆಸೆ ಆಗ್ತಿತ್ತು... ಸ್ನೇಹಿತ್ರಿಗೆ ಹೇಳಿದಾಗ ಯಾರೂ ಇಂಟ್ರೆಸ್ಟ್ ತೋರಿಸಿರ್ಲಿಲ್ಲ... ಹಾಗಾಗಿ ಫಸ್ಟ್ ಪಿಯುಸಿಯಲ್ಲಿ ಕೋಪಟ್ಟಿ ಬೆಟ್ಟ ಹತ್ತೋ ಆಸೆ ಈಡೇರ್ಲಿಲ್ಲ. ಇನ್ನು ಸೆಕೆಂಡ್ ಪಿಯುಸಿಗೆ ಬಂದಕೂಡ್ಲೇ, ಕಾಲೇಜಿಗೆ ಕಾಣೋ ಆ ಬೆಟ್ಟ ಆಗಾಗ್ಗೆ ಕರೆದ ಹಾಗೆ ಆಗ್ತಿತ್ತು ! ಮಳೆ ಇದ್ರೆ ಬೆಟ್ಟಕ್ಕೆ ಚಾರಣ ಹೋಗೋದು ಆಗದ ಮಾತು. ಏಕಂದ್ರೆ ಅಲ್ಲಿ ನಮ್ಮ ಹೆಬ್ಬೆಟ್ಟು ಗಾತ್ರದ ಜಿಗಣೆಗಳು ರಕ್ತ ಹೀರೋದಿಕ್ಕೆ ಕಾದು ಕೂತಿರ್ತವೆ ! ಅಲ್ಲೆಲ್ಲಾ ಮಳೆಗಾಲ ಕಳೆಯೋದಿಕ್ಕೆ ಅಕ್ಟೋಬರ್ ತಿಂಗಳೇ ಬರಬೇಕು. ಮಳೆಗಾಲ ಮುಗೀತ್ತಿದ್ದ ಹಾಗೆ ಚಳಿಗಾಲವೂ ಶುರುವಾಗಿರುತ್ತೆ... ಹಾಗಾಗಿ ನನ್ನ ಆಸೆಗೆ ಒಂದಿಲ್ಲೊಂದು ಅಡ್ಡಿ ಎದುರಾಗ್ತಿತ್ತು. ಕೋಪಟ್ಟಿ ಬೆಟ್ಟಕ್ಕೆ ಹೋಗ್ಲೇಬೇಕು ಅನ್ನೋ ನನ್ನ ಆಸೆಗೆ ಅಷ್ಟುಹೊತ್ತಿಗೆ ಇನ್ನಿಬ್ಬರು ಸೇರ್ಕೊಂಡಿದ್ದ್ರು. ಚರಣ್ ಮತ್ತೆ ಸುಬ್ಬಯ್ಯ.... ಸುಬ್ಬಯ್ಯ ಒಂದು ಐಡಿಯಾ ಕೊಟ್ಟ. `ನಂ ಇಂಗ್ಲೀಷ್ ಲೆಕ್ಚರರ್ ರಾಮಕೃಷ್ಣ ಸರ್ ಮನೆ ಅದೇ ಕೋಪಟ್ಟಿಬೆಟ್ಟದ ಕೆಳಗೆ ಬರುತ್ತೆ. ಅವ್ರನ್ನ ಹೇಗಾದ್ರೂ ಮಾಡಿ ಒಪ್ಪಿಸಿದ್ರೆ, ನಮ್ಮ ದಾರಿ ಸುಗಮವಾಗುತ್ತೆ.' ರಾಮಕೃಷ್ಣ ಸರ್ ಸ್ಟಾಫ್ರೂಂನಿಂದ ಹೊರಗೆ ಬರೋದನ್ನೇ ಕಾದು, ನಾವು ತ್ರಿಮೂತರ್ಿಗಳು ವಿಷಯವನ್ನ ಅವ್ರ ಕಿವಿಗೆ ಹಾಕಿದ್ವಿ. ಅವ್ರೂ ಬರೋದಾಗಿ ಖುಷಿಯಿಂದ್ಲೇ ಒಪ್ಪಿಕೊಂಡ್ರು. ಆದ್ರೆ ಫೆಬ್ರವರಿ ತನಕ ಕಾಯೋದಿಕ್ಕೆ ತಿಳಿಸಿದ್ರು. ಯಾಕಂದ್ರೆ, ಆ ಬೆಟ್ಟ ಹತ್ತೋದಿಕ್ಕೆ ಅದೇ ಅದೇ ಸರಿಯಾದ ತಿಂಗಳು ಅಂತ ಅನುಭವಿಯಾದ ಅವ್ರ ಅಭಿಪ್ರಾಯ ಆಗಿತ್ತು.
ಅಂತೂ ಆ ಫೆಬ್ರವರಿ ಬಂತು. ಮೊದ್ಲು ಪ್ರಿನ್ಸಿಪಾಲ್ ಹತ್ರ ಪರ್ಮಿಷನ್ ತಕ್ಕೊಳಿ ಅಂತ್ರ ಸೂಚಿಸಿದ್ರು ರಾಮಕೃಷ್ಣ ಸರ್. ಯಾರು ಬರ್ತಾರೋ ಬಿಡ್ತಾರೋ... ನಂ ಕ್ಲಾಸಿನ ಎಲ್ಲಾ ಹುಡುಗ್ರ ಹೆಸ್ರನ್ನ ಬರ್ದು, ಪ್ರಿನ್ಸಿ ಮುಂದೆ ಇಟ್ವಿ. ಅವ್ರು ಒಂದಿಷ್ಟು ಸಲಹೆ ಕೊಟ್ಟು ಒಪ್ಪಿಗೆ ಸೂಚಿಸಿದ್ರು. ಕೂಡ್ಲೇ ನಮ್ ಚಾರಣಕ್ಕೆ ಒಂದು ಶನಿವಾರವನ್ನ ಆಯ್ಕೆ ಮಾಡ್ಕೊಂಡೆವು. ಆವತ್ತು ಮಧ್ಯಾಹ್ನ ಹೊರಟು ಬೆಟ್ಟದ ಮೇಲೆ ಹಾಲ್ಟ್ ಮಾಡೋದು, ಭಾನುವಾರ ಸಂಜೆ ವಾಪಸ್ ಬರೋದು ಅಂತ ತೀರ್ಮಾನ ಆಯ್ತು. ಸರ್, ನಾವು ಮೂವರು, ತಿಮ್ಮಯ್ಯ, ಸಚಿನ್ ಹೀಗೆ ಇನ್ನೋದು 10 ಹುಡುಗ್ರು ಬೆಟ್ಟ ಏರೋದಿಕ್ಕೆ ರೆಡಿ ಆದ್ವಿ. ನಾವ್ಯಾರೂ ವೃತ್ತಿಪರ ಚಾರಣಿಗರಲ್ಲ. ಹಾಗಾಗಿ ನಮ್ಮ ಸಿದ್ಧತೆಗಳೂ ವೃತ್ತಿಪರ ಆಗಿರ್ಲಿಲ್ಲ. ಅಂತೂ ನಮ್ಮ ಆಸೆ ಈಡೇರುವ ದಿನ ಬಂದೇ ಬಿಡ್ತು...
ಶನಿವಾರದ ಕ್ಲಾಸ್ಮುಗಿದ ಕೂಡ್ಲೇ ನಾವು, ಭಾಗಮಂಡಲ ಕಡೆ ಹೋಗೋ ರಾಮ ಬಸ್ ಹತ್ತಿ ಕೋಪಟ್ಟೀಲ್ಲಿ ಇಳಿದೆವು. ಸೀದಾ ನಮ್ ಸರ್ ಮನೆ ಕಡೆ ನಮ್ಮ ಪ್ರಯಾಣ. ಅಲ್ಲಿಂದ ಶುರುವಾಯ್ತು ನಿಜವಾದ ಚಾರಣ...ಸರ್ ತೋಟ ಅದೇ ಕೋಪಟ್ಟಿ ಬೆಟ್ಟಕ್ಕೆ ಹೋಗೋ ದಾರೀಲೇ ಇದೆ. ರಾತ್ರಿ ಅಡುಗೆ ಮಾಡಿಕೊಡೋಕೆ ಸರ್ ತೋಟದಲ್ಲಿ ಕೆಲಸ ಮಾಡೋ ಅಪ್ಪಿ ನಮ್ಮ ಜೊತೆ ಸೇರಿಕೊಂಡ. ಅವನ ಜೊತೆ ಅವ್ನ ಗೆಳೆಯ `ರಾಮು' ಕೂಡ ಇದ್ದ. ಅಂದ ಹಾಗೆ `ರಾಮು'ದ್ದು ಕೂಡ ಒಂದು ಒಳ್ಳೇ ಕಥೆ.
`ರಾಮು', ಅಪ್ಪ, ಅಮ್ಮನ ಜೊತೆ ಕಾಡಿನಲ್ಲೇ ಇದ್ದ. ಕಾಫಿ ತೋಟದಲೆಲ್ಲಾ ಸುತ್ತಾಡ್ತಾ ತುಂಬಾ ಮಜವಾಗಿ ಇದ್ದ. ಅವ್ನು ರುಚಿ ನೋಡದ ಕಾಡು ಹಣ್ಣುಗಳೇ ಇಲ್ಲ. ಅಂಥ `ರಾಮು'ನ ಅವ್ನ ಅಪ್ಪ, ಅಮ್ಮ ಮತ್ತೆ ಜೊತೆಗಾರರೆಲ್ಲಾ ಕಾಫಿ ತೋಟದಲ್ಲೇ ಬಿಟ್ಟು ಎಲ್ಲಿಗೋ ಹೋಗಿಬಿಟ್ರು. ಅಗ ದಿಕ್ಕಿ ಕಾಣದೇ ಕೂತಿದ್ದ `ರಾಮು'ಗೆ ದಿಕ್ಕಾಗಿದ್ದು, ಅಪ್ಪಿ. `ರಾಮು' ಅಪ್ಪಿಗೆ ಸಿಗೋ ಮೊದ್ಲು ಅದೊಂದು ಮಂಗ. ನಂತರ `ರಾಮು'ನ ಅಪ್ಪಿ ಯಾವತ್ತೂ ಮಂಗ ಅಂತ ನೋಡಲೇ ಇಲ್ಲ. ಅಂಥ `ರಾಮು' ಕೋಪಟ್ಟಿಬೆಟ್ಟ ಚಾರಣಕ್ಕೆ ನಮ್ಮ ಜೊತೆ ಸೇರಿಕೊಂಡಿದ್ದ. ಸ್ವಲ್ಪ ಹೊತ್ತಲ್ಲೇ ಎಲ್ಲರ ಜೊತೆಯೂ ಹೊಂದಿಕೊಂಡ. ಅದರಲ್ಲೂ `ರಾಮು'ಗೆ, ಚರಣ್ ಅಂದ್ರೆ ತುಂಬಾ ಇಷ್ಟ ಆಗಿಬಿಟ್ಟ.
ಅಪ್ಪಿ ಮನೇಂದ ಕೋಪಟ್ಟಿಬೆಟ್ಟಕ್ಕೆ ಏರು ಹಾದಿ.... ಎರಡು ಚಿಕ್ಕಬೆಟ್ಟಗಳನ್ನ ಹತ್ತಿ ಇಳೀಬೇಕು. ಆಮೇಲೆ ಸಿಗುತ್ತೆ ಕೋಪಟ್ಟಿಬೆಟ್ಟ. ಕೆಳಗೆ ಕಾಫಿತೋಟ... ಮೇಲಕ್ಕೆ ಹೋದಹಾಗೆ...ದಟ್ಟ ಕಾಡು... ಇನ್ನು ಮೇಲಕ್ಕೆ ಹೋದ್ರೆ ಕಾಡು ನಿಧಾನವಾಗಿ ಮರೆಯಾಗಿ ಹುಲ್ಲುಗಾವಲು ಶುರುವಾಗುತ್ತೆ. ಅದೊಂಥರ ಆಳೆತ್ತರ ಬೆಳೆಯೋ ಹುಲ್ಲು. ಆನೆಹುಲ್ಲು ಅಂತ ಅದ್ನ ಕರೀತಾರೆ. ಆನೆಗಳು ಅದ್ರ ಮಧ್ಯೆ ಇದ್ದ್ರೆ ಗೊತ್ತೇ ಆಗೋಲ್ಲ. ಅಲ್ಲಿಂದ ಮುಂದಕ್ಕೆ ಒಂದು ದಾರಿ ಇದೆ. ಅದ್ನ ನೋಡಿದ್ಕೂಡ್ಲೇ ವಾಪಸ್ ಹೋಗಿಬಿಡೋಣ್ವ ಅನ್ನಿಸಿಬಿಡ್ತು. ಏಕಂದ್ರೆ, ಅದೊಂದು ದೊಡ್ಡ ಬಂಡೆಯಲ್ಲಿ ಕೊರೆದಿರೋ ದಾರಿ. ಒಂದಡಿ ಅಗಲ ಇರ್ಬಹುದು ಅಷ್ಟೇ....ಕೆಳಗೆ ಪ್ರಪಾತ... ಬಿದ್ರೆ ವಾಪಸ್ `ಕುಕ್ಕೇಲಿ ತುಂಬಿಸಿಕೊಂಡು' ಬರ್ಬೇಕು.... ಬೆಟ್ಟದ ಇನ್ನೊಂದು ಬದಿಗೆ ಹೋಗೋದಿಕ್ಕೆ ಇರೋದು ಇದೊಂದೇ ದಾರಿ. ಅಶ್ಚರ್ಯ ಅಂದ್ರೆ ಇದೇ ದಾರೀಲಿ ಆನೆಗಳ ಹಿಂಡು ದಾಟಿ ಬಂದು ಕೋಪಟ್ಟಿಯಲ್ಲಿ ಬಾಳೆ ತೋಟ ಧ್ವಂಸ ಮಾಡ್ತವೆ. ಆನೆಗಳ ಅಷ್ಟು ದೊಡ್ಡ ಬಾಡಿಯೇ ಇಲ್ಲಿ ದಾಟಿದ್ಮೇಲೆ ನಮ್ದೇನು ಮಹಾ ಅಂತ, ಜೀವ ಕೈಲಿ ಹಿಡಿದ್ಕೊಂಡು ಅಂತೂ ಆ ದಾರೀನ ನಿಧಾನಕ್ಕೆ ದಾಟಿ ಯುದ್ಧ ಗೆದ್ದಹಾಗೆ ಸಂಭ್ರಮಿಸಿದೆವು! ಇಲ್ಲಿಗೆ ಮುಗೀಲಿಲ್ಲ, ಚಾರಣ...
ಸುಮಾರು 70 ಡಿಗ್ರಿ ಓರೆಯಾಗಿರೋ ಬೆಟ್ಟವನ್ನ ಮತ್ತೆ 2 ಗಂಟೆ ಕಾಲ ಏದುಸಿರು ಬಿಡುತ್ತಾ ಏರಿದೆವು.... ಬೆಟ್ಟದ ತುದಿ ತಲುಪೋದಿಕ್ಕೆ ಇದ್ದಿದ್ದು ಬರೀ 300 ಮೀಟರ್ ಮಾತ್ರ. ಆದ್ರೆ, ದಾರಿ ಹಾಗಿತ್ತು ! ಅಂತೂ ಬೆಟ್ಟದ ತುದಿ ತಲುಪುವಾಗ ಸಂಜೆ ಐದೂವರೆ ಗಂಟೆ.... ಅಲ್ಲಿ ಜೋರು ಗಾಳಿ. ಒಂದು ಗಟ್ಟಿಯಾದ ಟೆಂಟ್ ಹಾಕ್ಬೇಕಾದ್ರೆ ಸಾಕುಬೇಕಾಯ್ತು. ರಾತ್ರಿ ಆಗ್ತಿದ್ದ ಹಾಗೆ ಚಳಿಯ ಪ್ರಮಾಣವೂ ಜೋರಾಯ್ತು. ಕ್ಯಾಂಪ್ ಫೈರ್ ಹಾಕಿಕೊಂಡು ಕೂತ್ರೂ, ಹಾಡು ಹೇಳಿಕೊಂಡು ಕುಣಿದಾಡಿದ್ರೂ ಚಳಿ ಮಾತ್ರ ಕಡಿಮೆ ಆಗಿಲ್ಲ. ಇದ್ರ ಜೊತೆ ಇನ್ನು ಕೆಲವು ಕಣ್ತುಂಬಿಸಿಕೊಳ್ಳೋ ಅಂಶಗಳೂ ಇದ್ದ್ವು! ಸೂಯರ್ಾಸ್ತದ ಆ ಸುಂದರ ನೋಟ... ದೂರದಲ್ಲಿ ಕಾಣೋ ಮಡಿಕೇರಿಯ `ದೀಪಾವಳಿ'... ಸಂಪಾಜೆ ಘಾಟ್ನಲ್ಲಿ ಓಡಾಡೋ ವಾಹನಗಳ ಬೆಳಕು....ಪ್ರಪಾತದಲ್ಲೆಲ್ಲೋ ಘೀಳಿಡ್ತಿರೋ ಆನೆ ಹಿಂಡು.. ಇದರ ಬೆನ್ನಲ್ಲೇ ಊಳಿಡೋ ನರಿಗಳು..ಅಬ್ಬಾ! ಮಧ್ಯಾಹ್ನದಿಂದ ಪಟ್ಟ ಕಷ್ಟ ಎಲ್ಲಾ ಕಳೆದುಹೋದ ಅನುಭವ! ಬೆಳಗ್ಗೆಯೂ ಹಾಗೆ, ಮೈ ನಡುಗಿಸೋ ಚಳಿ ಇದ್ದ್ರೂ, ಸೂರ್ಯೋದಯ ನೋಡ್ಬೇಕು ಅನ್ನೋ ಆಸೆಯಿಂದ ಟೆಂಟ್ನಿಂದ ಹೊರಗೋಡಿ ಬಂದು ಆ ನೋಟವನ್ನ ಕ್ಯಾಮೆರಾದಲ್ಲಿ ಸೆರೆಹಿಡ್ಕೊಂಡ್ವಿ..... ಭಾನುವಾರ ಮಧ್ಯಾಹ್ನವರೆಗೆ ಅಲ್ಲಿ ಕಳೆದು, ನಿಧಾನಕ್ಕೆ ಬೆಟ್ಟ ಇಳಿಯೋದಿಕ್ಕೆ ಶುರುಮಾಡಿದ್ವಿ...
Monday, 3 October 2011
ನಾಗತೀರ್ಥ ಯಾತ್ರೆ!
ಯಾರದ್ರೂ ಅದ್ನ ಅಲ್ಲಿ ಕಲ್ಲಲ್ಲಿ ಕಡೆದು ಇಟ್ರಾ... ಅಥ್ವಾ ನೀರು ಹರಿವ ರಭಸಕ್ಕೆ ಅಂಥದ್ದೊಂದು ಆಕೃತಿ ಹುಟ್ಟಿಕೊಳ್ತಾ ? ಏನೇ ಆದ್ರೂ, ಅದು ಒಂದು ಸುಂದರ ರೂಪ. ಥೇಟ್ ಹಾವಿನ ಹೆಡೆ...ಅದ್ರ ಮೇಲಿಂದ ಧುಮ್ಮಿಕ್ಕೋ ಜಲಧಾರೆ...ಶಿವನ ಮುಡಿಯಿಂದ ಗಂಗೆ ಇಳಿದುಬಂದ ಹಾಗೆ ಅಂತ ಬೇಕಿದ್ರೂ ಹೇಳಿ...
ನಾನು ಹೇಳ್ತಿರೋದು ನಾಗತೀರ್ಥದ ಬಗ್ಗೆ. ಹೌದು, ನಾಗತೀರ್ಥ ಭಾಗಮಂಡಲ ಹತ್ತಿರ ಇರೋ, ತುಂಬಾ ಜನರಿಗೆ ಗೊತ್ತಿಲ್ಲದ ಜಾಗ. ಕಾವೇರಿ ಪುರಾಣದಲ್ಲಿ ನಾಗತೀರ್ಥದ ಪ್ರಸ್ತಾಪ ಬರುತ್ತೆ. ಅಗಸ್ತ್ಯ ಋಷಿ ಮೇಲೆ ಸಿಟ್ಟು ಮಾಡ್ಕೊಂಡು ಕಾವೇರಿ, ನದಿಯಾಗಿ ಹೊರಡ್ತಾಳೆ. ಆಗ ಇದೇ ನಾಗತೀರ್ಥದಲ್ಲಿ ಹಾವುಗಳು ಕಾವೇರಿಯನ್ನ ತಡೆಯುತ್ತವಂತೆ. ಆದ್ರೂ ಕಾವೇರಿ ಇಲ್ಲಿಂದ ಮುಂದಕ್ಕೆ ಹರೀತ್ತಾಳೆ. ಈ ನಾಗತೀರ್ಥದ ಮೂಲಕ ಹರಿದು ಬರೋದ್ರಿಂದ ಕಾವೇರಿಯ ನೀರು ನಂಜಾಗಿರುತ್ತಂತೆ. ಗಾಯಕ್ಕೆ ಮುಟ್ಟಿದ್ರೆ ಬೇಗ ಗುಣವಾಗೋಲ್ವಂತೆ... ಇದೆಲ್ಲಾ ನಂಬಿಕೆ. ಅದರ್ಲಿ, ನಾಗತೀರ್ಥದ ಬಗ್ಗೆ ಹೇಳ್ತಿದ್ದೆ ಅಲ್ವಾ ?
ಸ್ಕೂಲ್ಗೆ ಹೋಗುವಾಗ ಆಗಾಗ್ಗೆ ನಾವು ನಾಗತೀರ್ಥದ ಬಗ್ಗೆ ಕೇಳ್ತಿದ್ವಿ. ಅದು ಕೋಳಿಕಾಡುಗೆ ಹತ್ರ ಅಂತ ಗೊತ್ತಿತ್ತು. ತಿಮ್ಮಯ್ಯ, ಬೆಳ್ಯಪ್ಪ ಇನ್ನೊಂದೆರಡು ಮೂರು ಜನ ಅಲ್ಲಿಂದ ನಮ್ಮ ಸ್ಕೂಲ್ಗೆ ಬತರ್ಿದ್ದ್ರು. ಹಾಗಾಗಿ ಅವ್ರ ಜೊತೇಲಿ ಹೋದ್ರೆ ನಾಗತೀರ್ಥ ನೋಡ್ಬಹುದು ಅನ್ನೋ ಆಸೆ ಹುಟ್ಟಿಕೊಳ್ತು. ಅವ್ರಿಗೆ ಇದನ್ನ ಹೇಳಿದಾಗ ಜೋರಾಗಿ ನಗಾಡೋಕೆ ಶುರು ಮಾಡಿದ್ರು. `ಹೊಳೆ ಒಳಗೆನೇ ಮೂರು ಮೈಲು ನಡೀಬೇಕು..ಹಾವುಗಳು ಬೇರೆ ಇರ್ತವೆ... ನಿಮ್ಕೈಲೆಲ್ಲಾ ಇದು ಆಗೋದಿಲ್ಲ ಬಿಡಿ...' ಅಂತ ಕೋಳಿಕಾಡಿನ ಆ ಗೆಳೆಯರು ಹೇಳಿಬಿಟ್ರು. ನಮ್ಗೆ ಇದೊಂಥರ ಅವಮಾನ ಅನ್ನಿಸ್ತು. ಯಾಕೆ ಆಗೋದಿಲ್ಲ ನೋಡೇಬಿಡೋಣ ಅಂತ, ಒಂದು ಭಾನುವಾರ ಬೆಳಗ್ಗೆ ತಲಕಾವೇರಿಗೆ ಹೋಗೋ ಆನೇಕಲ್ ಬಸ್ ಹತ್ತಿ ಕೋಳಿಕಾಡಲ್ಲಿ ಇಳಿದೇಬಿಟ್ವಿ...
ಭಾಗಮಂಡಲದಲ್ಲಿ ನಮ್ಮದೊಂದು ಗೆಳೆಯರ ಟೀಮ್ ಇತ್ತು. ನಾನು, ಗುರು, ರವಿ, ಶ್ಯಾಂ, ಕಿರಣ, ಅರುಣ, ಅನಂತ, ಮುನ್ನ... ದೊಡ್ಡ ಬಳಗ. ರಜೆ ಬಂತಂದ್ರೆ ಮನೇಲಿ ಇರೋರೇ ಅಲ್ಲ ನಾವು. ತಾವೂರು ಬೆಟ್ಟ, ಬ್ರಹ್ಮಗಿರಿ, ವಿಂಡ್ಮಿಲ್ ಬೆಟ್ಟ ಎಲ್ಲಾ ಆವಾಗ್ಲೇ ನಮ್ಮ ಮುಂದೆ ಚಿಕ್ಕವಾಗಿಬಿಟ್ಟಿದ್ದವು ! ನಾವು ಎಲ್ಲಿ ಹೋಗ್ತಿದ್ದೀವೀಂತ ಮನೇಲಿ ಹೇಳ್ತಿರ್ಲಿಲ್ಲ. ಹೇಳಿದ್ರೆ, ಹೋಗೋಕೆ ಬಿಡ್ತಿರ್ಲಿಲ್ಲ.... ಹಾಗೆ, ನಮ್ಮ ಮುಂದಿನ `ಸಾಹಸ ಯಾತ್ರೆ' ನಾಗತೀರ್ಥದ ಕಡೆಗೆ ಹೊರಟಿತ್ತು.
ಸರಿ, ಕೋಳಿಕಾಡಿನಲ್ಲಿ ಇಳಿದಾಯ್ತು... ನಾಗತೀರ್ಥಕ್ಕೆ ಹೋಗೋಕೆ ದಾರಿ ಗೊತ್ತಾಗ್ಬೇಕ್ಕಲ್ಲಾ... ಸೀದಾ ಬೆಳ್ಳಿಯಪ್ಪನ ಮನೆಗೆ ಹೋದ್ವಿ. ಅವ್ನ ಅಪ್ಪ ಗಂಗು ಅಲ್ಲೇ ಕೂತಿದ್ದ್ರು. ನಾವು ಬಂದ ವಿಷಯ ಗೊತ್ತಾಗ್ತಿದ್ದ ಹಾಗೆ, `ವಾಪಸ್ ಮನೆಗೆ ಹೋಗ್ತೀರೋ ಇಲ್ಲಾ, ನಿಮ್ಮ ಮನೆಗೆ ಹೋಗಿ ಹೇಳಲೋ' ಅಂತ ಧಮಕಿ ಹಾಕಿಬಿಟ್ಟ್ರು.... ಕೊನೆಗೆ ಹೇಗೋ ಅವರನ್ನ ಒಪ್ಪಿಸಿ, ಬೆಳ್ಳಿಯಪ್ಪ ಮತ್ತೆ ಅವ್ನ ಜೊತೆ `ದೊಡ್ಡವ್ರು' ಒಬ್ರನ್ನ ಕರ್ಕೊಂಡು ನಾಗತೀರ್ಥ ಯಾತ್ರೆ ಹೊರಟೇಬಿಟ್ಟೆವು....
ಬೆಳ್ಳಿಯಪ್ಪನ ಮನೇಂದ 50 ಮೀಟರ್ ದೂರ ಹೋದರೆ ಕಾವೇರಿ ನದಿ. ಅಲ್ಲಿ ಆಕೆಯ ಗಾತ್ರ ತುಂಬಾ ಚಿಕ್ಕದು. ಚಿಕ್ಕ ತೊರೆ ಇದ್ದ ಹಾಗೆ ಇದ್ದಾಳೆ. ಕಲ್ಲುಗಳು ತುಂಬಾ ಇವೆ. ನಂಜೊತೆ ಬಂದ `ದೊಡ್ಡವ್ರು' ನಮ್ಗೆಲ್ಲಾ ಒಂದೊಂದು ದೊಣ್ಣೆ ಕಡಿದುಕೊಟ್ಟ್ರು. ಚಪ್ಪಲಿ ಬಿಚ್ಚಿ ಕೈನಲ್ಲಿ ಹಿಡ್ಕೋಳೋಕೆ ಹೇಳಿದ್ರು. ಈ ಸಿದ್ಧತೆ ನೋಡ್ದಾಗ ಯಾಕೋ ಸ್ವಲ್ಪ ಹೆದ್ರಿಕೆ ಶುರುವಾಯ್ತು....ಮುಂದೆ ಏನು ಕಾದಿದೆಯಪ್ಪ ಅಂತ ನಾವೆಲ್ಲಾ ಮುಖಮುಖ ನೋಡಿಕೊಂಡ್ವಿ....
ನದಿಗೆ ಇಳಿದ ಕೂಡ್ಲೇ ಗೊತ್ತಾಯ್ತು... ಬೆಳ್ಯಪ್ಪ ಮತ್ತೆ ಟೀಮ್, ಅವ್ನ ತಂದೆ ಯಾಕೆ ಮೊದ್ಲೇ ಎಚ್ಚರಿಸಿದ್ದ್ರು ಅಂತ... ಕಾಲಿಟ್ಟಲೆಲ್ಲಾ ಜಾರುವ ಕಲ್ಲುಗಳು.. ಪಕ್ಕದಲ್ಲೇ ಪುಸಕ್ಕನೇ ಹಾದು ಹೋಗುವ ಚಿಕ್ಕಪುಟ್ಟ ಹಾವುಗಳು ! ಇನ್ನೂ ನಾಲ್ಕು ಹೆಜ್ಜೆ ಇಟ್ಟಿಲ್ಲ... ಆಗ್ಲೇ ನಮ್ಮಲ್ಲಿ ಕೆಲವ್ರು ಹಿಂದಕ್ಕೆ ಹೆಜ್ಜೆ ಇಡೋಕೆ ಶುರುಮಾಡಿದ್ರು! ಬೆಳ್ಯಪ್ಪ ಮುಸಿಮುಸಿ ನಗ್ತಿದ್ದ... ನಮ್ಮ ಕೈಲಿದ್ದ ಚಪ್ಪಲಿಗಳು ಕುತ್ತಿಗೆಗೆ ಹಾರ ಆಗಿದ್ವು ! ಶುರುವಾಯ್ತು ಯಾತ್ರೆ...ಸುಮಾರು ನಾಲ್ಕು ಕಿಲೋಮೀಟರ್ ನದಿಯೊಳಗಿನ ನಡಿಗೆ ! ಯಾಕಪ್ಪಾ ಬೇಕಿತ್ತು ಅನ್ನಿಸೋ ಹಾಗಿತ್ತು ಆ ಯಾತ್ರೆ.
ಅಂತೂ ನಾಗತೀರ್ಥ ತಲುಪಿಯೇ ಬಿಟ್ವು... ಆಹಾ! ನಮ್ಮ ಹತ್ತಿರದಲ್ಲೇ(?) ಎಷ್ಟು ಸುಂದರ ಜಾಗ... ಅಲ್ಲಿ ತಲುಪಿದ ಕೂಡ್ಲೇ ಎಲ್ಲರ ಆಯಾಸ ಮರೆಯಾಗಿತ್ತು. ಬ್ಯಾಗಿನಲ್ಲಿದ್ದ ಬಿಸ್ಕೆಟ್ ತಿಂದು, ಜ್ಯೂಸ್ ಕುಡ್ದು ಅಲ್ಲೇ ಕಲ್ಲು ಮೇಲೆ ಸ್ವಲ್ಪ ಹೊತ್ತು ಕೂತುಕೊಂಡ್ವಿ. ಅಷ್ಟು ಹೊತ್ತಿಗೆ ಅಪರಾಹ್ನ ಸುಮಾರು 3 ಗಂಟೆ ಆಗಿತ್ತು. ವಾಪಸ್ ಹೋಗೋ ಯೋಚ್ನೆ ಬರ್ತಿದ್ದ ಹಾಗೆ ಮತ್ತೆ ತಲೆನೋವು ಶುರುವಾಯ್ತು... ಅದು, ಮತ್ತೆ ಕಲ್ಲಿನಿಂದ ಕಲ್ಲಿಗೆ ಹಾರುತ್ತಾ, ಹಾವುಗಳಿಂದ ತಪ್ಪಿಸಿಕೊಳ್ತಾ ಕೋಳಿಕಾಡು ತಲುಪೋದು ಹೇಗೆ ಅನ್ನೋ ತಲೆನೋವು ! ಅಂತೂ ಮನೆಗೆ ಸುರಕ್ಷಿತವಾಗಿ ತಲುಪಿದಾಗ ರಾತ್ರಿ 8 ಗಂಟೆ ಆಗಿತ್ತು...
Saturday, 1 October 2011
ಮೀನು ಬೇಟೆ
ಹೊಳೆ ಮೀನು ತಿಂದವ್ರಿಗೆ ಅದ್ರ ರುಚಿ ಗೊತ್ತಿರುತ್ತೆ. ಮುಳ್ಳು ಸ್ವಲ್ಪ ಜಾಸ್ತಿ ಆದ್ರೂ, ರುಚಿ ಮುಂದೆ ಅದೆಲ್ಲಾ ಲೆಕ್ಕಕ್ಕೇ ಬರೋಲ್ಲ. ಎರಡು ಕೈ ಯೂಸ್ ಮಾಡ್ಕೊಂಡು ಮುಳ್ಳನ್ನೆಲ್ಲಾ ಬಿಡಿಸಿಕೊಂಡು.... ಆ ಹೊಳೆ ಮೀನುಗಳನ್ನ ತಿನ್ನೋದು ಇದ್ಯಲ್ಲಾ, ಹೇಳೋಕ್ಕೆ ಆಗೋಲ್ಲ..ತಿಂದು ಅನುಭವಿಸಬೇಕಷ್ಟೇ...ಇನ್ನು ಮೀನು ಹಿಡಿಯೋದು ಸಕ್ಕತ್ ಮಜಾ ಕೊಡುತ್ತೆ. ನದಿ ಹತ್ರ ವಾಸ ಮಾಡ್ತಾರಲ್ಲ, ಅವ್ರನ್ನ ಕೇಳಿನೋಡಿ...`ಅಯ್ಯೋ...ಮೊದಲಿನ ಹಾಗೆಲ್ಲ ಈಗ ಮೀನು ಇಲ್ಲ, ಎಲ್ಲಾ ಎಲ್ಲಿ ಹೋಗಿಬಿಟ್ವೋ...'ಅನ್ನೋದನ್ನ ಕೇಳ್ಬಹುದು. ಹೌದು, ಅವ್ರು ಹೇಳೋದು ನಿಜ. ನನ್ನ ಅಜ್ಜಿ ಮನೆ ಮುಕ್ಕೋಡ್ಲುವಿನಲ್ಲಿ ಹಟ್ಟಿಹೊಳೆ ಹರಿಯುತ್ತೆ. ಇದೇ ಮುಂದೆ ಹಾರಂಗಿ ನದಿಯಾಗಿ ಡ್ಯಾಂ ಸೇರೋದು. ಈ ಹಟ್ಟಿಹೊಳೇಲಿ ಈ ಹಿಂದೆ ತುಂಬಾ ಮೀನುಗಳು ಇದ್ವು... ನಮ್ ಪಳಂಗ ಮಾವ ಅಥವಾ ಬಾಬು ಮಾವ ಕತ್ತಿ ಹಿಡ್ಕೊಂಡು ಹೊಳೆ ಹತ್ತಿರ ಹೋದ್ರು ಅಂದ್ರೆ ಸಾಕು, ಆವತ್ತು `ಬರೇಮೀನು' ಸಾರು ಗ್ಯಾರಂಟಿ ! ಬರೇಮೀನು ತುಂಬಾ ರುಚಿಯಾಗಿರುತ್ತೆ... ಆದ್ರೆ ಈಗ ಇದು ನದಿಯಲ್ಲಿ ಸಿಗೋದು ತುಂಬಾ ಕಡಿಮೆ. ಕೆರೆಯಲ್ಲಿ ಸಾಕಿದ ಬರೆಮೀನು ಅಂಗಡಿಗಳಲ್ಲಿ ಸಿಗುತ್ತೆ. ಆದ್ರೆ ಅದು ಟೇಸ್ಟ್ ಇರೋಲ್ಲ ಅನ್ನೋದು `ಹೊಳೆ ಮೀನು ತಜ್ಞರ' ಅಭಿಪ್ರಾಯ.
ಇನ್ನು ಸಣ್ಣಮಾಮ ಹೊಳೆಗೆ `ತೋಟ' ಹಾಕೋದ್ರಲ್ಲಿ ಎಕ್ಸ್ಪಟರ್್. ಅವ್ರು `ತೋಟ' ಹಾಕೋಕೆ ಹೊರಟ್ರು ಅಂದ್ರೆ, ನಾವೆಲ್ಲಾ ಅವ್ರ ಹಿಂದೆ ಹಿಂದೆ... ಬೀಡಿಯನ್ನ ಉಫ್ ಉಫ್ ಅಂತ ಹೇಳೋದು... ಅದ್ರಲ್ಲಿ ಕೆಂಡದ ಚಿಕ್ಕ ಚುಕ್ಕಿ ಕಾಣೋದು... ಆ ಚುಕ್ಕಿ ಮೇಲೆ `ತೋಟ'ದ ಬತ್ತಿಯನ್ನ ಇಡೋದು... ಆ ಬತ್ತಿ ಸುರು ಸುರು ಅಂತ ಹೇಳ್ತಿದ್ದ ಹಾಗೆ ನದಿಗೆ ಎಸೆಯೋದು... ಸ್ವಲ್ಪ ಹೊತ್ತು ಎಲ್ಲಾ ಕಡೆ ನಿಶ್ಯಬ್ಧ ! ನಾವೆಲ್ಲಾ ಕಿವಿ ಮುಚ್ಚಿಕ್ಕೊಂಡು ಕಣ್ಣು ಬಿಟ್ಟುಕೊಂಡು ತೋಟ ಎಸೆದ ಜಾಗ ನೋಡ್ತಿದ್ದ ಹಾಗೆ, ಢಮಾರ್ ಅನ್ನೋ ಸದ್ದಿನ ಜೊತೆ ನೀರಿನ ರಾಶಿ ಆಕಾಶದ ಕಡೆಗೆ ಚಿಮ್ತಿತ್ತು... ಜೊತೇಲಿ ಚಿಕ್ಕ, ದೊಡ್ಡ ಮೀನುಗಳೂ ! ಅಲ್ಲಿ ಆಳ ಜಾಸ್ತಿ ಇದ್ರೆ ನಮ್ಗೆ ಇಳಿಯೋದಿಕ್ಕೆ ಬಿಡ್ತಿರ್ಲಿಲ್ಲ..`ಮುಳುಗು ತಜ್ಞರು' ನದೀಲಿ ಸತ್ತು ತೇಲಾಡೋ ಮೀನುಗಳನ್ನ ಕಲೆಕ್ಟ್ ಮಾಡ್ತಿದ್ದ್ರು... ಕೆಜಿ ಗಟ್ಟಲೆ ಮೀನುಗಳು ಸಿಗ್ತಿದ್ದವು. ಈಗ `ತೋಟ' ಹಾಕಿದ್ರೆ ಬರೇ ನೀರು ಚಿಮ್ಮೋದನ್ನ ಮಾತ್ರ ನೋಡ್ಬಹುದು...ಜೊತೆಗೆ ಕಂಬಿ ಎಣಿಸೋ ಭಾಗ್ಯವೂ ಬರ್ಬಹುದು !
ಇನ್ನು ನಮ್ಗೆಲ್ಲಾ ತುಂಬಾ ಇಷ್ಟ ಆಗೋದು ಅಂದ್ರೆ, ಬಲೆ ಹಾಕಿ ಮೀನು ಹಿಡಿಯೋದು. ಒಂದು ದೊಡ್ಡ ಬಲೆ ಹಿಡ್ಕೊಂಡು, ಅರ್ಧಚಂದ್ರಾಕಾರದಲ್ಲಿ ನದಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗಲಾಗುತ್ತೆ. ಆಗ ಅದ್ರೊಳಗೆ ಮೀನುಗಳು ಸಿಕ್ಕಿಹಾಕೊಳ್ತವೆ. ಇದಕ್ಕೆ ಜನ ಜಾಸ್ತಿ ಇದ್ದಷ್ಟು ಒಳ್ಳೇದು... ಮೀನುಗಳೂ ಬೇಕಾದಷ್ಟು ಸಿಕ್ತಿದ್ದವು. ಈಗ ಮೀನುಗಳ ಸಂಖ್ಯೆ ತುಂಬಾ ಕಡಿಮೆ ಆಗಿರೋದ್ರಿಂದ ಈ ರೀತಿ ಬಲೆ ಹಾಕೋದೆಲ್ಲಾ ಅಪರೂಪ ಆಗ್ಬಿಟ್ಟಿದೆ.
ಬಲ್ಲಮಾವಟಿ ಹತ್ರ ಕಾವೇರಿ ನದಿ ಹರಿದುಹೋಗುತ್ತೆ. ಇಲ್ಲಿ ಹೆಚ್ಚಾಗಿ ರಾತ್ರಿ ನದಿಗೆ ಅಡ್ಡವಾಗಿ ಬಲೆ ಕಟ್ಟಿ ಬೆಳಗ್ಗೆ ತೆಗಿತಾರೆ. ಅದೃಷ್ಟ ಇದ್ರೆ ದೊಡ್ಡ ದೊಡ್ಡ ಮೀನುಗಳು ಸಿಗ್ತವೆ. ಇಲ್ಲಂದ್ರೆ, ಚಿಕ್ಕ ಮೀನುಗಳಿಗೇ ತೃಪ್ತಿಪಟ್ಟುಕೊಳ್ಳಬೇಕು. ನಮ್ ಎಡಿಕೇರಿ ಸುಮು ಈ ರೀತಿ ಬಲೆ ಹಾಕೋದ್ರಲ್ಲಿ ಎಕ್ಸ್ಪಟರ್್ ! ಈಗ ಅವ್ನು ಅಲ್ಲಿ ಇಲ್ಲ... ಹಾಗಂತ ಮೀನುಗಳ ಸಂಖ್ಯೆ ಜಾಸ್ತಿ ಆಗಿದೆಯಾ ಅಂತ ನೋಡಿದ್ರೆ, ಅಲ್ಲೂ ನಿರಾಸೆ!
ಗಾಳ ಹಾಕೋದು ಒಂಥರ ಚಟ ಇದ್ದಹಾಗೆ. ಮೀನು ಸಿಗ್ಲಿ, ಸಿಕ್ಕದಿರ್ಲಿ... ನದಿಗೆ ಗಾಳ ಬಿಟ್ಕೊಂಡು ಕೂರೋದ್ರಲ್ಲೂ ಒಂಥರ ಸುಖ ಇದೆ. ಭಾಗಮಂಡಲದಲ್ಲಿ ಮಳೆಗಾಲ ಸಮಯದಲ್ಲಿ ಕೊಡೆ ಹಿಡ್ಕೊಂಡು, ಒಂದು ಗಾಳ ತಕ್ಕೊಂಡು ಕಾವೇರಿ ಅಥ್ವಾ ಕನ್ನಿಕಾ ಹೊಳೆ ಕಡೆ ಹೋಗ್ಬಿಟ್ರೆ.... ಸಂಜೆ ಆಗೋದೇ ಗೊತ್ತಾಗ್ತಿರ್ಲಿಲ್ಲ. ಮನೆಗೆ ವಾಪಸ್ ಹೋಗ್ಬೇಕು ಅಂದ್ರೆ ಅಪ್ಪ ಕೋಲು ಜೊತೆ ಬರ್ಬೇಕಿತ್ತು. ಆಗೆಲ್ಲಾ ನಮ್ಗೆ ಸಿಗ್ತಿದ್ದದ್ದು, ಹಾವುಮೀನು....ಅದ್ನ ತಿನ್ತಿರ್ಲಿಲ್ಲ. ಆದ್ರೆ ಅದ್ನ ಹಿಡಿಯೋದು ತುಂಬಾ ಮಜಾ ಕೊಡ್ತಿತ್ತು.
ಇನ್ನೊಂದು ಅಮಾನವೀಯ ಪದ್ಧತಿ ಇದೆ. `ಮದ್ದು ಹಾಕೋದು' ಅಂತ ಅದನ್ನ ಹೇಳ್ತಾರೆ. ಕೀಟನಾಶಕ ಅಥ್ವಾ ಕಳೆನಾಶಕದಂಥ ರಾಸಾಯನಿಕವನ್ನ ನದಿಗೆ ಚೆಲ್ಲಿಬಿಡೋದು... ನದಿ ಹರಿದಷ್ಟೂ ದೂರ ಇಲ್ಲವೇ ಆ ರಾಸಾಯನಿಕದ ಶಕ್ತಿ ಕಡಿಮೆ ಆಗೋ ಜಾಗದ ತನಕ ಮೀನುಗಳು ಸೇರಿ ಎಲ್ಲಾ ಜಲಚರಗಳ ಮಾರಣಹೋಮವೇ ನಡೆದು ಹೋಗ್ತಿತ್ತು. ಈಗ ಈ ಥರ ಮಾಡೋದು ಕಡಿಮೆ ಆಗಿದೆ. ಆದ್ರೆ ದ್ವೇಷಕ್ಕೆ ಕೆರೆಗಳಲ್ಲಿ ಈ ರೀತಿ ಮಾಡೋದು ಉಂಟು.
ಏನೇ ಹೇಳಿ, ಹೊಳೆ ಮೀನುಗಳ ಟೇಸ್ಟ್ ಮತ್ತೆ ಅದನ್ನ ಹಿಡಿಯೋವಗ ಸಿಗೋ ಮಜಾವೇ ಬೇರೆ....
Thursday, 29 September 2011
RAMA BUS
ವಿಜಯಲಕ್ಷ್ಮೀ ಬಂತು, ಗುರುರಾಘವೇಂದ್ರ ಹೋಯ್ತು, ಉದಯ ಬರ್ಲಿಕ್ಕೆ ಸ್ವಲ್ಪ ಲೇಟಾಗುತ್ತೆ ರಾಮ ಇವತ್ತು ಬೇಗ ಬಂತು.... ಇದು ಯಾವುದರ ಬಗ್ಗೆ ಹೇಳೋದು ಗೊತ್ತಾ ? ಬಸ್ಗಳ ಬಗ್ಗೆ....ನಮ್ಮೂರು ಕಡೆ ಬಸ್ಗಳನ್ನ ಒಂದು ಯಂತ್ರ ಅಂತ ಯಾರೂ ನೋಡೋಲ್ಲ. ಅದ್ರಲ್ಲೂ ಪ್ರೈವೆಟ್ ಬಸ್ಗಳಂದ್ರೆ ಸ್ವಲ್ಪ ಪ್ರೀತಿ ಜಾಸ್ತಿ. ಹಾಗಾಗಿ ಬಸ್ಗಳ ಹೆಸ್ರು ಹೇಳೋವಾಗ ಯಾರೂ ಹೆಸರಿನ ಮುಂದೆ, ಮತ್ತೆ ಬಸ್ ಅಂತ ಸೇರಿಸೋ ಕಷ್ಟ ತಗೊಳ್ಳೋಲ್ಲ! ನನ್ಗೆ ಸಣ್ಣವನಿದ್ದಾಗಲೇ ಈ ರಾಮ ಬಸ್ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಅದ್ರಲ್ಲೂ ತಲಕಾವೇರಿ ರಾಮ ಅಂದ್ರೆ ಏನೋ ಒಂಥರ ಪ್ರೀತಿ ! ಭಾಗಮಂಡಲ ಮತ್ತೆ ಮಡಿಕೇರಿ ಮಧ್ಯೆ ಇರೋ ದೂರ 38 ಕಿಲೋಮೀಟರ್. ಇಷ್ಟು ಅಂತರ ಕ್ರಮಿಸೋದಿಕ್ಕೆ ರಾಮಬಸ್ ಹತ್ತಿರ ಹತ್ತಿರ ಎರಡೂವರೆ ಗಂಟೆ ತಕ್ಕೊಳ್ತಿತ್ತು. ಡ್ರೈವರ್ ರಾಘವಯ್ಯಣ್ಣ, ಬಸ್ಗೆ ನೋವಾಗುತ್ತೋ, ರೋಡ್ಗೆ ಪೆಟ್ಟಾಗುತ್ತೋ ಅಥ್ವಾ ತಮ್ಮ ಸೊಂಟ ಉಳುಕಿ ಎಲ್ಲಿ ರಾತ್ರಿ ಹೆಂಡತಿ ಕೈಯಲ್ಲಿ ಬೈಸಿಕೊಳ್ಳಬೇಕಾಗುತ್ತೋ ಅನ್ನೋ ಹಾಗೆ ನಿಧಾನಕ್ಕೆ ಓಡಿಸ್ತಿದ್ದ್ರು. ಭಾಗಮಂಡಲದಲ್ಲಿ ಹತ್ತಿ ಕೂತವ್ರಿಗೆ ಮಡಿಕೇರಿ ಟೋಲ್ಗೇಟ್ ತಲುಪೋ ತನಕ ಒಳ್ಳೇ ಒಂದು ನಿದ್ದೆ ಆಗ್ತಿತ್ತು. ಈಗ ಭಾಗಮಂಡಲದಲ್ಲಿ ಪ್ರತೀ ವರ್ಷ ಮೆರಥಾನ್ ನಡೆಯುತ್ತೆ. ಇದ್ರಲ್ಲಿ ಫಸ್ಟ್ ಬರೋರು ಮಡಿಕೇರಿಯಿಂದ ಭಾಗಮಂಡಲಕ್ಕೆ ಬರೀ ಒಂದೂವರೆ ಗಂಟೇಲಿ ಓಡ್ತಾರೆ. ಅಂದ್ರೆ ಆ ರಾಮ ಬಸ್ಗಿಂತ ಈ ಓಡೋ ಜನರೇ ಫಾಸ್ಟ್ ಅಂದ ಹಾಗೆ ಆಯ್ತು. ಅಂದ ಹಾಗೆ ಈ ತಲಕಾವೇರಿ ರಾಮ ಇದ್ಯಲ್ಲ, ಇದು ತಲಕಾವೇರಿ ದೇವಾಸ್ಥಾನಕ್ಕೆ ಸೇರಿದ ಬಸ್ ರಾಮ ಮೋಟಾರ್ರ್ಸನವ್ರು ಇದನ್ನ ದೇವಾಸ್ಥಾನಕ್ಕೆ ಕೊಟ್ಟಿದ್ದಾರೆ. ಆದ್ರೆ ಮೈಂಟೇನೆನ್ಸ್ ಎಲ್ಲಾ ಅವ್ರೇ ನೋಡಿಕೊಳ್ಳೋದ್ರಿಂದ ದೇವಸ್ಥಾನಕ್ಕೆ ವರ್ಷಕ್ಕೆ ಇಷ್ಟು ಅಂತ ಕೊಡ್ತಾರೆ. ಹೋದ ತಿಂಗ್ಳು ನಾನು ಭಾಗಮಂಡಲಕ್ಕೆ ಹೋಗಿದ್ದೆ. ಆ ತಲಕಾವೇರಿ ರಾಮ ಎಲ್ಲಾದ್ರೂ ಕಾಣುತ್ತಾ ಅಂತ ಹುಡುಕ್ತಿದ್ದಾಗ, ಭಾಗಮಂಡಲ ದೇವಸ್ಥಾನ ಎದುರೇ ನಿಂತಿತ್ತು. ಕ್ಲೀನರ್ `ತಲಕಾವೇರಿ' `ತಲಕಾವೇರಿ' ಅಂತ ಕರೀತ್ತಿದ್ದ.... ಬಸ್ ಬಣ್ಣನೂ ಈಗ ಚೇಂಜ್ ಆಗಿತ್ತು. ಬಹುಶಃ ಅದ್ರ ಡ್ರೈವರ್, ಸ್ಪೀಡ್ ಕೂಡ ಬದ್ಲಾಗಿರ್ಬಹುದೇನೋ....
Tuesday, 27 September 2011
PARBU
ದುಗರ್ಾಭವನ ಹೊಟೇಲಿನ ಒಂದು ಕತ್ತಲ ಕೋಣೆ. ಆ ಹೊಟೇಲಿನಲ್ಲಿ ಸೇಲಾಗೋ ಎಲ್ಲಾ ಥರದ ದೋಸೆ, ಇಡ್ಲಿಗೆ ಬೇಕಾದ ಹಿಟ್ಟು ರೆಡಿಯಾಗೋದು ಅಲ್ಲೇ...ಹಾಗಂತ ಆ ರೂಂನಲ್ಲೇನೂ ಗ್ರೈಂಡರ್ ಇಟ್ಟಿಲ್ಲ. ವರ್ಷದಲ್ಲಿ 6 ತಿಂಗಳಿಗೂ ಜಾಸ್ತಿ ಆಕಾಶ ತೂತಾದ ಹಾಗೆ ಸುರಿಯೋ ಮಳೆ..ಮೂರು ತಿಂಗಳು ಮಾತ್ರ ದಿನ ಪೂತರ್ಿ ಕರೆಂಟ್ ಇರೋ ಭಾಗಮಂಡಲದಂಥ ಊರಲ್ಲಿ ಗ್ರೈಂಡರ್ ತಂದಿಡೋ ಧೈರ್ಯ ಯಾರೂ ಮಡೋಲ್ಲ ಬಿಡಿ. ಹಾಗಾದ್ರೆ ಆ ಕತ್ತಲ ರೂಂನಲ್ಲಿ ಹಿಟ್ಟು ರೆಡಿ ಆಗೋದು ಹೇಗೆ? ಅಲ್ಲೋಬ್ಬ ಮಾನವ ರೂಪದ ಮೆಷಿನ್ ಇದ್ದ. ಆವ್ನೇ ಪಬರ್ು. ಹೊಟೇಲಿಗೆ ಬರೋ ಗಿರಾಕಿಗಳು ಯಾರೂ ಪಬರ್ುನ ನೋಡಿರೋದಿಕ್ಕೆ ಸಾಧ್ಯ ಇಲ್ಲ. ಯಾಕಂದ್ರೆ ಅವ್ನು ಹಾಗೆಲ್ಲಾ ಹೊರಗೆ ಬರೋನೇ ಅಲ್ಲ. 15 ದಿನಕ್ಕೊಮ್ಮೆಯೋ ತಿಂಗಳಿಗೆ ಒಂದು ಸಲವೋ ಹೊರಗೆ ಕಾಣಿಸಿಕೊಳ್ತಿದ್ದ. ಆವತ್ತು ಅವನ ರಜೆಯ ದಿನ ಆಗಿರ್ತಿತ್ತು. ಅದೂ ಓನರ್ ಕೊಟ್ರೆ ಮಾತ್ರ ರಜೆ ತೆಗೆದುಕೊಳ್ತಿದ್ದ. ನೀಟಾಗಿ ಹೇರ್ಕಟ್, ಶೇವ್, ಸ್ನಾನ ಮಾಡ್ಕೊಂಡು ಹೊರಗೆ ಬರ್ತಿದ್ದ. ಹಿಂದಿನ ಬಾಗಿಲೇ ಅವ್ನಿಗೆ ಹೆಬ್ಬಾಗಿಲು. ಅಲ್ಲಿಂದ ಅವ್ನು ಸೀದಾ ಹೋಗ್ತಿದ್ದದ್ದು ನಾಪೋಕ್ಲು ರೋಡ್ನಲ್ಲಿದ್ದ ಸುಂದರನ ಸಾರಾಯಿ ಅಂಗಡಿಗೆ. ಅಲ್ಲಿ ಅವ್ನಿಗೆ ಬೇಕಾಗಿದ್ದು ಸಿಗ್ಲಿಲ್ಲ ಅಂದ್ರೆ ಈಕಡೆ ಲಕ್ಕಿ ಸ್ಟೋರ್ ಹತ್ರ ಇದ್ದ ಹರ್ಷನ ಸಾರಾಯಿ ಅಂಗಡಿ ಕಡೆ ಹೆಜ್ಜೆ ಹಾಕ್ತಿದ್ದ... ಅಷ್ಟೂ ದಿನದ ಬಾಕಿ ಎಲ್ಲಾ ತೀರಿಸೋ ಹಾಗೆ ಕುತ್ತಿಗೆ ತನಕ ಕುಡೀತ್ತಿದ್ದ. ಆಮೇಲೆ ಪಬರ್ುನ ನೋಡ್ಬೇಕು... ಆ ದುಗರ್ಾಭವನ ಹೊಟೇಲಿನ ಕತ್ತಲ ಕೋಣೇಲಿ ಕೂತು ಹಿಟ್ಟು ರುಬ್ಬೋ ಮೌನಮೂತರ್ಿ ಪಬರ್ು ಇವ್ನೇನಾ ಅನ್ನೋ ಹಾಗೆ ವತರ್ಿಸ್ತಿದ್ದ. ಇಂಗ್ಲೆಂಡ್ನ ಮಹಾರಾಣಿ ವಿಕ್ಟೋರಿಯಾ, ಜರ್ಮನಿಯ ಹಿಟ್ಲರ್, ನಮ್ಮ ಜವಾಹರಲಾಲ್ ನೆಹರು ಅದೇ ಭಾಗಮಂಡಲದ ಮರಿ ರೌಡಿ ಉಂಞ್ಞ ಎಲ್ಲರಿಗೂ ಸಿಕ್ಕಾಪಟ್ಟೆ ಮಂಗಳಾರತಿ ಮಾಡಿಬಿಡ್ತಿದ್ದ. ಅದ್ರಲ್ಲೂ ಮುಸ್ಲಿಮರು ಅಂದ್ರೆ ಸಾಕು ಪಬರ್ುಗೆ ಅದೆಂಥದ್ದೋ ಸಿಟ್ಟು. ಬಹುಷಃ ಮೊದ್ಲು ಅವ್ನು ಜಾಫರ್ ಹೊಟೇಲ್ನಲ್ಲಿ ಕೆಲ್ಸ ಮಾಡ್ತಿದ್ದಾಗ ಸರಿಯಾಗಿ ನೋಡಿಕೊಂಡಿರ್ಲಿಲ್ಲವೇನೋ.... ಎಲ್ಲರಿಗೂ ಬೈದು ಸುಸ್ತಾದ ಮೇಲೆ 10 ಕಟ್ಟು ಸಾಧು ಬೀಡಿ ತಕ್ಕೊಂಡು ಮತ್ತೆ ಅದೇ ತನ್ನ ಕತ್ತಲು ಕೋಣೆ ಸೇರಿಬಿಡ್ತಿದ್ದ ಈ ಪಬರ್ು. ಇವ್ನು ಬಿ ಸಿ ರೋಡ್ ಹತ್ರದ ಯಾವುದೋ ಊರಿನವನಂತೆ. ಭಾಗಮಂಡಲಕ್ಕೆ ಯಾವಾಗ ಬಂದ್ನೋ ಯಾರಿಗೂ ಗೊತ್ತಿಲ್ಲ. ಕೇಳಿದ್ರೆ, ನಾನು ಇದೂವರೆಗೂ ಬಸ್ನಲ್ಲೇ ಕೂತಿಲ್ಲ ಅಂತ ತುಳುವಿನಲ್ಲಿ ಹೇಳ್ತಿದ್ದ. ಇಂಥ ಪಬರ್ುಗೆ ಒಮ್ಮಿಂದೊಮ್ಮೆಲೇ ಹುಟ್ಟೂರು ನೆನಪಾಯ್ತು. ಯಾವತ್ತೂ ಬಸ್ ಹತ್ತದ ಪಬರ್ು ಆವತ್ತು ಭಾಗಮಂಡಲದಿಂದ ಮಂಗಳೂರಿಗೆ ಹೋಗೋ ಬಸ್ ಹತ್ತಿದ್ದ...ಯಾಕೋ ಅವ್ನ ಕಣ್ಣಿನಲ್ಲಿ ತೆಳುವಾಗಿ ನೀರಿನ ಪರದೆ ಕಾಣಿಸಿಕೊಂಡಿತ್ತು...ಅನ್ನ ಕೊಟ್ಟ ಊರನ್ನ ಬಿಟ್ಟು ಹೋಗ್ತಿದ್ದೀನಿ ಅನ್ನೋ ಕಾರಣಕ್ಕೋ ಅಥವಾ ಜನ್ಮ ನೀಡಿದ ನಾಡಿಗೆ ಮರಳುತ್ತಿದ್ದೇನೆ ಅಂತಲೋ... ಕೇಳೋಣ ಅಂದ್ರೆ ಆ ಪಬರ್ು ಈಗ ಎಲ್ಲಿ ಇದ್ದಾನೆ ಅನ್ನೋದು ಯಾರಿಗೂ ಗೊತ್ತಿಲ್ಲ.....
Subscribe to:
Posts (Atom)